ಚೆನ್ನೈ: ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ (Cough Syrup) ತಯಾರಕ ಕಂಪನಿ ಸ್ರೇಸನ್ ಫಾರ್ಮಾಸ್ಯುಟಿಕಲ್‌ನ (Sresan Pharmaceutical) ಉತ್ಪಾದನಾ ಪರವಾನಗಿಯನ್ನು ತಮಿಳುನಾಡು ಔಷಧ ನಿಯಂತ್ರಣ ಇಲಾಖೆ ಸೋಮವಾರ ರದ್ದುಗೊಳಿಸಿದೆ. ಇದನ್ನೂ ಓದಿ : ಹಾಸ್ಯನಟ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನ

ಅಲ್ಲದೇ ಕಂಪನಿಯನ್ನು ಮುಚ್ಚುವಂತೆ ಆದೇಶ ನೀಡಿದೆ. ಈ ಔಷಧದಲ್ಲಿ ವಿಷಕಾರಿ ದ್ರಾವಣವಾದ ಡೈಎಥಿಲೀನ್ ಗ್ಲೈಕೋಲ್ (DEG) 48.6% ಇರುವುದು ಪತ್ತೆಯಾಗಿದೆ. ಈ ಔಷಧವು ಮಧ್ಯಪ್ರದೇಶದಲ್ಲಿ ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ವರದಿಯಾಗಿದೆ.

ವಿಷಕಾರಿ ದ್ರಾವಣವಾದ ಡೈಎಥಿಲೀನ್ ಗ್ಲೈಕೋಲ್‌ವಿರುವ ಸ್ರೇಸನ್ ಕಂಪನಿಯನ್ನು ಅಧಿಕೃತವಾಗಿ ಮುಚ್ಚಲಾಗಿದೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ತಿಳಿಸಿದೆ. ಅಲ್ಲದೇ ತಮಿಳುನಾಡಿನ ಎಲ್ಲಾ ಔಷಧ ಉತ್ಪಾದನಾ ಘಟಕಗಳಲ್ಲಿ ಸಮಗ್ರ ತಪಾಸಣೆಗೆ ಇಲಾಖೆ ಆದೇಶಿಸಿದೆ.

ಮಧ್ಯಪ್ರದೇಶ, ರಾಜಸ್ಥಾನದಲ್ಲಿ ವಿಷಕಾರಿ ದ್ರಾವಣವಾದ ಡೈಎಥಿಲಿನ್ ಗ್ಲೈಕಾಲ್ ಮತ್ತು ಎಥಿಲಿನ್ ಗ್ಲೈಕಾಲ್ ಇರುವ ಸಿರಪ್ ಸೇವಿಸಿದ 20 ಮಕ್ಕಳು ಮೂತ್ರಪಿಂಡ ಸೋಂಕಿನಿಂದ ಮೃತಪಟ್ಟಿದ್ದರು. ಕೆಲ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದರು.

ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಿಸುವ ಸ್ರೇಸನ್ ಫಾರ್ಮಾ ಮಾಲೀಕ ರಂಗನಾಥನ್‌ನನ್ನು ಮಧ್ಯಪ್ರದೇಶ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದರು. ಅಲ್ಲದೇ ಈ ಪ್ರಕರಣವನ್ನು ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಅಲ್ಲದೇ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಚೆನ್ನೈನಲ್ಲಿ ಸ್ರೇಸನ್ ಫಾರ್ಮಾ ಮತ್ತು ತಮಿಳುನಾಡು ಔಷಧ ನಿಯಂತ್ರಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಂಬಂಧಿಸಿದ 7 ಸ್ಥಳಗಳ ಮೇಲೆ ದಾಳಿ ಮಾಡಿತ್ತು.