ಬೆಳಗಾವಿ: ಗಣೇಶ ಚತುರ್ಥಿಯ(Ganesh Chaturthi) ಸಂಭ್ರಮದಲ್ಲಿದ್ದ ಒಂದೇ ಕುಟುಂಬದ ಆರು ಮಂದಿಯನ್ನು ಬಲಿಪಡೆದ ನಗರದ ಚವಾಟ್‌ ಗಲ್ಲಿಯ ಭೀಕರ ಅಗ್ನಿ ದುರಂತ(Fire Tragdy) ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದೆ. ಇದನ್ನೂ ಓದಿ : ಒಂದೇ ರಾತ್ರಿಯಲ್ಲಿ 1,100 ಡ್ರೋನ್‌ಗಳ ದಾಳಿ – ರಷ್ಯಾ ಮೇಲೆ ಉಕ್ರೇನ್‌ ಅತಿದೊಡ್ಡ ಅಟ್ಯಾಕ್‌

ಮೇಲ್ನೋಟಕ್ಕೆ ‘ಫ್ರಿಡ್ಜ್‌ ಕಂಪ್ರೆಸರ್ ಸ್ಫೋಟ’ದಿಂದ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡ ಎಂದೇ ಭಾವಿಸಲಾಗಿದ್ದ ಈ ಘಟನೆಗೆ ಈಗ ಯೋಜಿತ ಕೊಲೆಯ ಕರಾಳ ನೆರಳು ಬಿದ್ದಿದ್ದು, ತನಿಖೆಯಲ್ಲಿ ಲಭ್ಯವಾಗಿರುವ ಸಿಸಿಟಿವಿ ದೃಶ್ಯಗಳು(CCTV) ಬೆಚ್ಚಿಬೀಳಿಸಿವೆ.

ಸೆಪ್ಟೆಂಬರ್ 16ರ ಗಣೇಶ ಚತುರ್ಥಿಯ ರಾತ್ರಿ ಚವಾಟ್‌ ಗಲ್ಲಿಯ ಶೆಡ್‌ನಲ್ಲಿ ವಾಸವಿದ್ದ ದಮೋನೆ ಕುಟುಂಬವು ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಹಬ್ಬದ ಊಟ ಮುಗಿಸಿ ನೆಮ್ಮದಿಯಿಂದ ನಿದ್ರೆಗೆ ಜಾರಿತ್ತು. ಆದರೆ ಬೆಳಗಿನ ಜಾವ ಇಡೀ ಶೆಡ್‌ ಹೊತ್ತಿ ಉರಿದಿದ್ದು, ಸ್ಥಳದಲ್ಲೇ ನಾಲ್ವರು ಸಜೀವ ದಹನವಾಗಿದ್ದರು.
ಭಾರತಿ ದಮೋನೆ (50), ಶಾರದಾ ದಮೋನೆ (45), ಪ್ರಿಯಾ (28), ಗಂಗಾ (25) ಸ್ಥಳದಲ್ಲೇ ಮೃತಪಟ್ಟರೆ ಗಂಭೀರ ಸುಟ್ಟ ಗಾಯಗಳೊಂದಿಗೆ ಕೆಎಲ್‌ಇ ಆಸ್ಪತ್ರೆಗೆ ದಾಖಲಾಗಿದ್ದ ಕುಟುಂಬದ ಹಿರಿಯ ಗಜಾನನ ದಮೋನೆ (61) ಮತ್ತು ಯುವಕ ರೋಷನ್ (23) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.

ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಇಡೀ ಕುಟುಂಬವೇ ಈ ದುರಂತದಲ್ಲಿ ನಾಶವಾಗಿತ್ತು. ಸ್ಥಳಕ್ಕೆ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಆಸೀಫ್ ಸೇಠ್ ಭೇಟಿ ನೀಡಿ ಸಾಂತ್ವನ ಹೇಳಿ ಪರಿಹಾರದ ಭರವಸೆಯನ್ನೂ ನೀಡಿದ್ದರು.

ಸಿಸಿಟಿವಿಯಿಂದ ತಿರುವು

ಆರಂಭಿಕ ತನಿಖೆಯಲ್ಲಿ ಇದು ಶಾರ್ಟ್ ಸರ್ಕ್ಯೂಟ್ ಅಥವಾ ಫ್ರಿಡ್ಜ್‌ ಸ್ಫೋಟದಿಂದ ಸಂಭವಿಸಿದ ಅವಘಡ ಎಂದೇ ನಂಬಲಾಗಿತ್ತು. ಆದರೆ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆಘಾತಕಾರಿ ದೃಶ್ಯಗಳು ಬೆಳಕಿಗೆ ಬಂದಿವೆ:

ಬೆಂಕಿ ಕಾಣಿಸಿಕೊಳ್ಳುವುದಕ್ಕೂ ಕೆಲವೇ ಕ್ಷಣಗಳ ಮೊದಲು ಚವಾಟ್‌ ಗಲ್ಲಿಯಲ್ಲಿ ಅಪರಿಚಿತ ವ್ಯಕ್ತಿಗಳು ಕೈಯಲ್ಲಿ ಬಕೆಟ್ ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡಿರುವುದು ಸೆರೆಯಾಗಿದೆ. ಕೈಯಲ್ಲಿ ಬಕೆಟ್ ಹೊತ್ತು ಶೆಡ್ ಬಳಿ ಹೋದ ವ್ಯಕ್ತಿಗಳು ಕೇವಲ ಐದು ನಿಮಿಷಗಳ ಅಂತರದಲ್ಲಿ ಬರಿಗೈಯಲ್ಲಿ ವೇಗವಾಗಿ ಓಡಿ ಪರಾರಿಯಾಗಿದ್ದಾರೆ.

ಬಕೆಟ್‌ನಲ್ಲಿ ತರಲಾಗಿದ್ದು ಪೆಟ್ರೋಲ್, ಸೀಮೆಎಣ್ಣೆ ಅಥವಾ ಇತರ ಯಾವುದೇ ದಹನಕಾರಿ ರಾಸಾಯನಿಕವೇ? ಉದ್ದೇಶಪೂರ್ವಕವಾಗಿ ಹೊರಗಿನಿಂದ ಬೆಂಕಿ ಹಚ್ಚಿ, ನಂತರ ಅದನ್ನು ಫ್ರಿಡ್ಜ್ ಸ್ಫೋಟದಂತೆ ಬಿಂಬಿಸಲು ಸಂಚು ರೂಪಿಸಲಾಗಿತ್ತೇ ಎಂಬ ಬಲವಾದ ಅನುಮಾನ ಮೂಡಿದೆ.

ಪ್ರಕರಣವು ಈಗ ಸಾಮೂಹಿಕ ಕೊಲೆಯ ಶಂಕೆ ಹುಟ್ಟುಹಾಕಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಅವರು ವಿಶೇಷ ತಂಡವನ್ನು ರಚಿಸಿದ್ದಾರೆ.

ಶೆಡ್ ಬಳಿ ಬಂದು ಪರಾರಿಯಾದ ಆ ಅಪರಿಚಿತ ಆಗಂತುಕರು ಯಾರು? ಬಕೆಟ್‌ನಲ್ಲಿ ತಂದಿದ್ದ ದ್ರವ ಯಾವುದು? ದಮೋನೆ ಕುಟುಂಬಕ್ಕೆ ಸ್ಥಳೀಯವಾಗಿ ಆಸ್ತಿ, ಹಣಕಾಸು ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆ ಇತ್ತೇ ಈ ಆಯಾಮದಲ್ಲಿ ತನಿಖೆ ಆರಂಭಿಸಿದ್ದಾರೆ.

ಬೆಳಗಾವಿ ಪೊಲೀಸರು ಘಟನಾ ಸ್ಥಳದ ಸಮಗ್ರ ವಿಧಿವಿಜ್ಞಾನ (FSL) ವರದಿಗಾಗಿ ಕಾಯುತ್ತಿದ್ದು, ಶಂಕಿತರ ಪತ್ತೆಗೆ ಜಾಲ ಬೀಸಿದ್ದಾರೆ. ಇದು ಕೇವಲ ತಾಂತ್ರಿಕ ದೋಷದಿಂದ ಸಂಭವಿಸಿದ ದುರಂತವೋ ಅಥವಾ ದ್ವೇಷದಿಂದ ಇಡೀ ಕುಟುಂಬವನ್ನೇ ಸುಟ್ಟುಹಾಕಿದ ಕೃತ್ಯವೋ ಎಂಬುದು ಶೀಘ್ರದಲ್ಲೇ ಬಹಿರಂಗವಾಗಬೇಕಿದೆ.