ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) 14ನೇ ಆರೋಪಿ ಪ್ರದೋಷ್(Pradosh) ನ್ಯಾಯಾಲಯಕ್ಕೆ ಸಲ್ಲಿಸಿರುವ 11 ಪುಟಗಳ ಕ್ಷಮಾದಾನ ಅರ್ಜಿ (ಮಾಫಿ ಸಾಕ್ಷಿ) ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ.
ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಪ್ರದೋಷ್, ಜಯನಗರದ ಮೈದಾನದಲ್ಲಿ ದರ್ಶನ್ (Darshan) ಪರಿಚಯವಾದ ದಿನದಿಂದ ಹಿಡಿದು ಜೈಲು ಪಾಲಾಗುವವರೆಗಿನ ಇಡೀ ಘಟನಾವಳಿಯನ್ನು ಎಳೆಎಳೆಯಾಗಿ ಸಿಸಿಎಚ್-59 ನ್ಯಾಯಾಧೀಶರ ಮುಂದೆ ಬಿಚ್ಚಿಟ್ಟಿದ್ದಾನೆ.
ಅರ್ಜಿಯಲ್ಲಿ ಏನಿದೆ?
ಜಯನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ 2003 ರಿಂದ ದರ್ಶನ್ ನನಗೆ ಪರಿಚಯ. 2024 ರ ಜೂನ್ 8 ರಂದು ನಾನು ದರ್ಶನ್ ಮನೆಗೆ ತೆರಳಿದ್ದೆ. ಅಲ್ಲಿಂದ ನನ್ನನ್ನು ದರ್ಶನ್ ‘ಸ್ಟೋನಿ ಬ್ರೂಕ್ಸ್’ ರೆಸ್ಟೋರೆಂಟ್ಗೆ ಕರೆದೊಯ್ದರು.
ಮಧ್ಯಾಹ್ನ 3 ಗಂಟೆಗೆ ಪವನ್ ರೆಸ್ಟೋರೆಂಟ್ಗೆ ಬಂದು ದರ್ಶನ್ಗೆ ಮೊಬೈಲ್ನಲ್ಲಿ ಏನೋ ತೋರಿಸಿದ್ದ. ಅದನ್ನು ನೋಡಿ ಕೋಪಗೊಂಡ ದರ್ಶನ್, ತಕ್ಷಣವೇ ಪವಿತ್ರಾ ಗೌಡಗೆ ಕರೆ ಮಾಡಿ ಮಾತನಾಡಿದರು. ಬಳಿಕ ಪವಿತ್ರಾ ಗೌಡ ನಿವಾಸದ ಕಡೆಗೆ ಕಾರು ಚಲಾಯಿಸುವಂತೆ ನನಗೆ ಸೂಚಿಸಿದರು.
ಸಂಜೆ 4:30 ಕ್ಕೆ ಪವಿತ್ರಾ ಗೌಡ ನಿವಾಸ ತಲುಪಿದ ದರ್ಶನ್ ಹಾಗೂ ಪವಿತ್ರಾ, ಒಂದೇ ಕಾರಿನಲ್ಲಿ ಆರ್ಆರ್ ನಗರದ ಪಟ್ಟಣಗೆರೆ ಶೆಡ್ಗೆ ತಲುಪಿದರು. ಶೆಡ್ಗೆ ಪ್ರವೇಶಿಸಿದಾಗ 30 ವರ್ಷದ ರೇಣುಕಾಸ್ವಾಮಿ ತಲೆಬಾಗಿಸಿಕೊಂಡು ಕುಳಿತಿದ್ದ. ಆತನ ಸುತ್ತ ರಾಘವೇಂದ್ರ, ಪವನ್, ನಾಗರಾಜ್ ಹಾಗೂ ನಂದೀಶ್ ಇದ್ದರು.
ನನ್ನ ಪವಿತ್ರಾಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತೀಯಾ?” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ ದರ್ಶನ್, ರೇಣುಕಾಸ್ವಾಮಿಗೆ ಹೊಡೆದರು. ನಂತರ ದರ್ಶನ್ ಸೂಚನೆಯಂತೆ ಪವಿತ್ರಾ ಗೌಡ ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಹೊಡೆದರು.
ರೇಣುಕಾಸ್ವಾಮಿಯ ಬಟ್ಟೆ ಬಿಚ್ಚಿ ಒಳಉಡುಪಿನಲ್ಲಿ ನಿಲ್ಲಿಸಲಾಯಿತು. ನಂದೀಶ್ ಆತನನ್ನು ಟಾಟಾ ಏಸ್ ವಾಹನಕ್ಕೆ ನೇಣು ಹಾಕಲು ಯತ್ನಿಸಿದರೆ, ನಾಗರಾಜ್ ನೈಲಾನ್ ಹಗ್ಗದಿಂದ ಹಾಗೂ ನಂದೀಶ್-ಪವನ್ ಮರದ ಕೋಲಿನಿಂದ ಬಾರಿಸಿದರು.
ರೇಣುಕಾಸ್ವಾಮಿಯ ಇನ್ಸ್ಟಾಗ್ರಾಂನಲ್ಲಿ ‘ಗೌತಮ್’ ಹೆಸರಿನ ಪ್ರೊಫೈಲ್ ಪತ್ತೆಯಾಯಿತು. ಅದರಲ್ಲಿ ಹಲವು ಮಹಿಳೆಯರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದು ಕಂಡುಬಂದಾಗ ದರ್ಶನ್ ಆತನ ಒಳ ಉಡುಪನ್ನೂ ತೆಗೆಸಿ, ಖಾಸಗಿ ಅಂಗಕ್ಕೆ ಸಾಲು ಸಾಲು ಒದೆಗಳನ್ನು ನೀಡಿದರು. ಕೊನೆಗೆ ಎರಡೂ ಕಾಲುಗಳಿಂದ ರೇಣುಕಾಸ್ವಾಮಿಯ ಎದೆ ತುಳಿದು ವಿನಯ್ ಜೊತೆ ಸಂಜೆ 5:30 ಕ್ಕೆ ಸ್ಥಳದಿಂದ ತೆರಳಿದರು.
ಗನ್ ತೋರಿಸಿ ಬೆದರಿಸಿದ್ರು
ಸಂಜೆ ದರ್ಶನ್ ಹೋದ ಮೇಲೆ ರೇಣುಕಾಸ್ವಾಮಿ ಮೃತಪಟ್ಟಿದ್ದನ್ನು ಗಮನಿಸಿ ನಾನು ಮನೆಗೆ ಓಡಿಹೋಗಿ ವಿಷಯ ತಿಳಿಸಿದೆ. ವಿಷಯ ಕೇಳಿ ಆಘಾತಕ್ಕೊಳಗಾದ ದರ್ಶನ್, ತಮ್ಮ ಬಳಿ ಇದ್ದ ಗನ್ ತೆಗೆದು “ನೀನು ನನಗೆ ಸಹಾಯ ಮಾಡಲೇಬೇಕು, ಇಲ್ಲದಿದ್ದರೆ ನಾನು ಗುಂಡು ಹಾರಿಸಿಕೊಂಡು ಸಾಯುತ್ತೇನೆ” ಎಂದು ನನಗೆ ಬೆದರಿಕೆ ಹಾಕಿದರು.
ನಾನು ಇನ್ಸ್ಪೆಕ್ಟರ್ ವಿನಯ್ಗೆ ಕರೆ ಮಾಡಿ ವಿಷಯ ತಿಳಿಸಿದಾಗ, “ಪ್ರಕರಣ ಗಂಭೀರವಾಗಿದೆ, ಯಾರನ್ನಾದರೂ ಶರಣಾಗುವಂತೆ ಮಾಡಿ” ಎಂದು ಸಲಹೆ ನೀಡಿದರು. ರಾಘವೇಂದ್ರ, ನಂದೀಶ್ ಮತ್ತು ಪವನ್ ಶರಣಾಗಲು ಒಪ್ಪಿಕೊಂಡಾಗ, ರೇಣುಕಾಸ್ವಾಮಿ ಮೃತದೇಹವನ್ನು ‘ಸತ್ವ ಅಪಾರ್ಟ್ಮೆಂಟ್’ ಬಳಿಯ ಚರಂಡಿಗೆ ಬಿಸಾಡಿ, ಬಳಿಕ ಅವರು ಕಾಮಾಕ್ಷಿಪಾಳ್ಯ ಠಾಣೆಗೆ ಸರೆಂಡರ್ ಆಗಲು ತೆರಳಿದರು.
ಈ ಮಧ್ಯೆ ಶವ ಸಾಗಾಟ, ಸಾಕ್ಷಿ ಮುಚ್ಚಿಹಾಕಲು ಮತ್ತು ಪೊಲೀಸರಿಗೆ ಶರಣಾಗುವವರಿಗೆ ನೀಡಲು 30 ಲಕ್ಷ ರೂ. ಹಣವನ್ನು ಹೇಗೆ ಹೊಂದಿಸಲಾಯಿತು ಹಾಗೂ ಯಾರ್ಯಾರಿಗೆ ಹಂಚಲಾಯಿತು ಎಂಬ ಸಂಪೂರ್ಣ ವಹಿವಾಟಿನ ವಿವರವನ್ನೂ ಪ್ರದೋಷ್ ಬರೆದಿದ್ದಾರೆ.
ಹಲ್ಲೆ ನಡೆಯುತ್ತಿದ್ದಾಗ ನಾನು ರೇಣುಕಾಸ್ವಾಮಿಯನ್ನು ರಕ್ಷಿಸಲು ಯತ್ನಿಸಿದೆ, ಹಲ್ಲೆ ನಿಲ್ಲಿಸುವಂತೆ ದರ್ಶನ್ ಮತ್ತು ಇತರರಲ್ಲಿ ಮನವಿ ಮಾಡಿದೆ. ಆದರೆ ಅವರು ಕೇಳಲಿಲ್ಲ. ಈ ಇಡೀ ಕೃತ್ಯದಲ್ಲಿ ಭಾಗಿಯಾಗಿದ್ದಕ್ಕೆ ನನಗೆ ಈಗ ತೀವ್ರ ಪಶ್ಚಾತ್ತಾಪವಾಗುತ್ತಿದ್ದು, ನ್ಯಾಯಾಲಯದ ಮುಂದೆ ಸತ್ಯ ಹೇಳಲು ಮಾಫಿ ಸಾಕ್ಷಿಯಾಗುತ್ತಿದ್ದೇನೆ ಎಂದು ಪ್ರದೋಷ್ ತಮ್ಮ 11 ಪುಟಗಳ ಸುದೀರ್ಘ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.
