ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ಮಹಿಳಾ ಮೋರ್ಚಾ ವತಿಯಿಂದ ತುಳುನಾಡಿನ ವಿಶೇಷ ಆಟಿ ತಿಂಗಳ ಸಂಭ್ರಮ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ‘ಆಟಿದ ಗಮ್ಮತ್ತು’ ವಿನೂತನ ಕಾರ್ಯಕ್ರಮವು ಇಂದು ಬಿ.ಸಿ.ರೋಡ್ನ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಇದನ್ನೂ ಓದಿ: ರೇಣುಕಾಸ್ವಾಮಿ ಒಳ ಉಡುಪನ್ನು ತೆಗೆದು ದರ್ಶನ್ ಹೊಡೆದಿದ್ದರು – ಪ್ರದೋಷ್ ಸಲ್ಲಿಸಿದ ಅರ್ಜಿಯಲ್ಲಿ ಏನಿದೆ?
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಎನ್. ಶೆಟ್ಟಿ ವಹಿಸಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಮುಖ್ಯ ಅತಿಥಿ ಗಂಗಾಧರ್ ಪಂಡಿತ್ ಗೋಳಿಕಟ್ಟೆ, ಮಂಡಲ ಉಪಾಧ್ಯಕ್ಷ ವಸಂತ ಅಣ್ಣಳಿಕೆ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಸುದರ್ಶನ್ ಬಜ, ರಾಜ್ಯ ನಾಯಕಿ ಸುಲೋಚನಾ ಜಿ.ಕೆ. ಭಟ್, ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ ಬಾಳಿಕೆ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಕಿತಾ ಆರ್. ಶೆಟ್ಟಿ, ಜಿಲ್ಲಾ ಪ್ರಭಾರಿ ಹಾಗೂ ಕಾರ್ಯದರ್ಶಿ ಅಮಿತಾ ಕುಶಲಪ್ಪ, ಮಂಡಲ ಕಾರ್ಯದರ್ಶಿ ಹಾಗೂ ಮಹಿಳಾ ಮೋರ್ಚಾ ಪ್ರಭಾರಿ ಹರ್ಷಿಣಿ ಪುಷ್ಪಾನಂದ, ಜಿಲ್ಲಾ ಉಪಾಧ್ಯಕ್ಷೆ ಕಮಲಾಕ್ಷಿ ಪೂಜಾರಿ, ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಕ್ಷತಾ ರಾಜೇಶ್ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಂದೇ ಮಾತರಂ ಸಾಮೂಹಿಕ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ದೀಪ ಬೆಳಗಿಸಿ ಪುಷ್ಪಾರ್ಚನೆ ನೆರವೇರಿಸಲಾಯಿತು.
ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಎನ್. ಶೆಟ್ಟಿ ಮಾತನಾಡಿ, ಆಟಿ ತಿಂಗಳ ಮಹತ್ವ, ತುಳುನಾಡಿನ ಆಚರಣೆಗಳು ಹಾಗೂ ಈ ತಿಂಗಳೊಂದಿಗೆ ಬೆಸೆದುಕೊಂಡಿರುವ ಸಂಪ್ರದಾಯಗಳ ಕುರಿತು ವಿವರಿಸಿದರು.
ರಾಜ್ಯ ನಾಯಕಿ ಸುಲೋಚನಾ ಜಿ.ಕೆ. ಭಟ್ ಮಾತನಾಡಿ, ಆಟಿ ತಿಂಗಳ ವಿಶೇಷ ತಿನಿಸುಗಳನ್ನು ತಯಾರಿಸುವ ಸಂದರ್ಭದಲ್ಲಿ ಮಹಿಳೆಯರು ವಹಿಸಬೇಕಾದ ಮುನ್ನೆಚ್ಚರಿಕೆ ಹಾಗೂ ಆರೋಗ್ಯದ ಕುರಿತು ಜಾಗೃತಿ ಮೂಡಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಗುರುವಾರ ನಡೆಯಲಿರುವ ತಿರಂಗ ಯಾತ್ರೆಯಲ್ಲಿ ಮಹಿಳಾ ಮೋರ್ಚಾದ ಎಲ್ಲಾ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಮುಖ್ಯ ಅತಿಥಿ ಗಂಗಾಧರ್ ಪಂಡಿತ್ ಗೋಳಿಕಟ್ಟೆ ಅವರು ತುಳುನಾಡಿನ ಆಟಿ ತಿಂಗಳಲ್ಲಿ ಬಳಕೆಯಾಗುತ್ತಿದ್ದ ವಿವಿಧ ಹಳ್ಳಿ ಮದ್ದುಗಳು ಹಾಗೂ ಸಾಂಪ್ರದಾಯಿಕ ಆರೋಗ್ಯ ಪದ್ಧತಿಗಳ ಕುರಿತು ವಿಸ್ತಾರವಾಗಿ ಮಾಹಿತಿ ನೀಡಿದರು.
ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ ಬಾಳಿಕೆ ಮಾತನಾಡಿ, ತುಳುನಾಡಿನ ಶ್ರೀಮಂತ ಸಂಸ್ಕೃತಿ, ಹಿರಿಯರ ಜೀವನಶೈಲಿ ಹಾಗೂ ಹಿಂದಿನ ಕಾಲದ ಬದುಕಿನ ವಿಧಾನಗಳ ಕುರಿತು ನೆನಪಿಸಿದರು.
ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಶ್ರೀ ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಜನಿ ಕಾರ್ಯಕ್ರಮ ನಿರೂಪಿಸಿದರು. ಪುಷ್ಪ ಎಸ್. ಕಾಮತ್ ವಂದಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಹಿಳಾ ಮೋರ್ಚಾದ ಸದಸ್ಯರು ತಮ್ಮ ಕೈಯಾರೆ ತಯಾರಿಸಿ ತಂದಿದ್ದ ವಿವಿಧ ಬಗೆಯ ಆಟಿ ತಿಂಗಳ ಸಾಂಪ್ರದಾಯಿಕ ವಿಶೇಷ ತಿನಿಸುಗಳ ಪ್ರದರ್ಶನ ಹಾಗೂ ಸಹಭೋಜನ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮುಖರು ಹಾಗೂ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಒಟ್ಟಾಗಿ ಸಾಂಪ್ರದಾಯಿಕ ಆಟಿ ತಿಂಡಿಗಳನ್ನು ಸವಿದು ತುಳುನಾಡಿನ ಸಂಸ್ಕೃತಿ ಮತ್ತು ಆಹಾರ ಪರಂಪರೆಯನ್ನು ಮೆಲುಕು ಹಾಕಿದರು.
