– ಮ್ಯಾನ್‌ಕೈಂಡ್ ಫಾರ್ಮಾ ಕಂಪನಿಯಿಂದ ಗೌರವ
ನವದೆಹಲಿ: ತನ್ನ ಜೀವದ ಹಂಗು ತೊರೆದು ಫ್ಲೈದುಬೈ ವಿಮಾನದಲ್ಲಿ 180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ಗೆ ‘ಮ್ಯಾನ್‌ಕೈಂಡ್ ಫಾರ್ಮಾ’ (Mankind Pharma) ಕಂಪನಿಯು 1 ಕೋಟಿ ರೂ. ಘೋಷಣೆ ಮಾಡಿದೆ.
ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸವನ್ನು ಇಡೀ ವಿಶ್ವವೇ ಕೊಂಡಾಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ದೇಶಾದ್ಯಂತದ ನಾಗರಿಕರು ಪ್ರಶಂಸೆ ಹಾಗೂ ಶುಭ ಹಾರೈಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆಯೇ ಕಂಪನಿಯು ಸ್ಮಿತ್ ಮಚ್ಚಾರ್‌ಗೆ 1 ಕೋಟಿ ಘೋಷಿಸಿದೆ.
ದುಬೈ-ಟೆಲ್ ಅವಿವ್ ನಡುವೆ ಸಂಚರಿಸುತ್ತಿದ್ದ ‘ಫ್ಲೈದುಬೈ’ (flydubai) ವಿಮಾನವನ್ನು ಪತನಗೊಳಿಸುವ ಪ್ರಯತ್ನ ನಡೆದಿತ್ತು. ಸಹ-ಪೈಲಟ್‌ನಿಂದ ಚಾಕು ಇರಿತಕ್ಕೆ ಒಳಗಾಗಿದ್ದರೂ ಮಚ್ಚಾರ್ (Smit Machchhar) ವಿಮಾನ ಸುರಕ್ಷಿತವಾಗಿ ಸೌದಿಯಲ್ಲಿ ಲ್ಯಾಂಡ್ ಆಗುವಂತೆ ನೋಡಿಕೊಂಡರು. ಅವರ ಅಸಾಧಾರಣ ಧೈರ್ಯ ಮತ್ತು ಮಾನವೀಯತೆಯನ್ನು ಗುರುತಿಸಿ, ಕೃತಜ್ಞತೆಯ ಸಂಕೇತವಾಗಿ 1 ಕೋಟಿ ರೂಪಾಯಿ ನೀಡಿ ಫಾರ್ಮಾ ಕಂಪನಿಯು ಗೌರವಿಸಿದೆ.
ಮ್ಯಾನ್‌ಕೈಂಡ್ ಫಾರ್ಮಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಜುನೇಜಾ ಅವರು ಮಚ್ಚಾರ್ ಅವರಿಗೆ ಪತ್ರ ಬರೆದಿದ್ದಾರೆ. ‘ಒಬ್ಬ ಭಾರತೀಯನಾಗಿ, ಇಡೀ ಜಗತ್ತಿನ ಮುಂದೆ ಒಬ್ಬ ಭಾರತೀಯ ಇಂತಹ ಧೈರ್ಯ, ಮಾನವೀಯತೆ ಮತ್ತು ಜವಾಬ್ದಾರಿಯನ್ನು ಪ್ರದರ್ಶಿಸುವುದನ್ನು ನೋಡಿ ನನಗೆ ಅಪಾರ ಹೆಮ್ಮೆ ಎನಿಸುತ್ತಿದೆ’ ಎಂದು ಅಭಿನಂದಿಸಿದ್ದಾರೆ
ನೀವು ರಕ್ಷಿಸಿದ ಜೀವಗಳ ಮೌಲ್ಯಕ್ಕಾಗಲಿ ಅಥವಾ ಲಕ್ಷಾಂತರ ಜನರಿಗೆ ನೀವು ನೀಡಿದ ಸ್ಫೂರ್ತಿಗಾಗಲಿ ಯಾವುದೇ ಹಣದ ಮೊತ್ತಕ್ಕೆ ಸಮವಾಗಲಾರದು. ನಿಮ್ಮ ಧೈರ್ಯ ಮತ್ತು ಮಾನವೀಯತೆಯ ಕುರಿತಾದ ನಮ್ಮ ಅಪಾರ ಗೌರವ, ಕೃತಜ್ಞತೆ ಮತ್ತು ಮೆಚ್ಚುಗೆಯ ಒಂದು ಸಣ್ಣ ಅಭಿವ್ಯಕ್ತಿ ಮಾತ್ರವೇ ಈ ಕೊಡುಗೆಯಾಗಿದೆʼ ಎಂದು ಆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭಾರತಕ್ಕೆ ಹೆಮ್ಮೆ ತಂದಿದ್ದಕ್ಕಾಗಿ ಹಾಗೂ ತನ್ನ ಸ್ವಾರ್ಥಕ್ಕಿಂತ ಇತರರಿಗೆ ಆದ್ಯತೆ ನೀಡಿದ್ದಕ್ಕಾಗಿ ಜುನೇಜಾ ಅವರು ಮಚ್ಚಾರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ‘ಕ್ಯಾಪ್ಟನ್ ಸ್ಮಿತ್.. ಒಬ್ಬ ಭಾರತೀಯರಾಗಿ ನಾವು ನಿಮಗೆ ನಮಸ್ಕರಿಸುತ್ತೇವೆ. ನೀವು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದೀರಿ’ ಎಂದು ಕೊಂಡಾಡಿದ್ದಾರೆ.
