ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ 645 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗೃಸ ಸಚಿವರಾದ ಡಾ.ಜಿ.ಪರಮೇಶ್ವರ್‌ ಅವರು  ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.
‘300 ಹಾಸಿಗೆಯುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಶಂಕುಸ್ಥಾಪನೆ’, ‘ತೀವ್ರ ನಿಗಾ ಘಟಕ’ ಲೋಕಾರ್ಪಣೆ, ‘100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ’, ‘ಕಿದ್ವಾಯಿ ಸ್ಮಾರಕ ಗ್ರಂಥಿ ವತಿಯಿಂದ ನಿರ್ಮಿಸಲಾದ ಕ್ಯಾನ್ಸರ್ ಆಸ್ಪತ್ರೆಯ ಉದ್ಘಾಟನೆ’, ‘ನೂತನ ನರ್ಸಿಂಗ್ ಕಾಲೇಜು ಮತ್ತು ಹಾಸ್ಟೇಲ್ ಉದ್ಘಾಟನೆ’ ಹಾಗೂ ಭೀಮಸಂದ್ರ ಕೆರೆ ಬಳಿ ನಿರ್ಮಿಸಲಾದ ತ್ಯಾಜ್ಯ ನೀರು ಶುದ್ಧೀಕರಣ ಘಟಕವನ್ನು ಉದ್ಘಾಟಿಸಲಾಯಿತು.
ತುಮಕೂರು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಭರಪೂರವಾಗಿ ನಡೆಯುತ್ತಿವೆ. 645 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಅಡಿಗಲ್ಲು‌ ಹಾಕಲಾಗಿದೆ. ಕೆಲವರು ದುರುದ್ದೇಶಪೂರ್ವಕವಾಗಿ,‌ ‘ರಾಜ್ಯದ ಅಭಿವೃದ್ಧಿಗೆ ಸರ್ಕಾರದ ಬಳಿ ಹಣ ಇಲ್ಲ’ ಎಂದು‌ ಜನರಿಗೆ ತಪ್ಪು ಮಾಹಿತಿಯನ್ನು ತಿಳಿಸುತ್ತಿದ್ದಾರೆ. ತುಮಕೂರು ಜಿಲ್ಲೆಯೊಂದರ ಅಭಿವೃದ್ಧಿಗೆ 645 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದರೆ ಅಚ್ಚರಿಯಲ್ಲವೇ? ಇದು ಸರ್ಕಾರದ ಹಣವಲ್ಲವೇ?
ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರವು ಅನುದಾನ ಕೊಟ್ಟಿದೆ. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು 16 ಸಲ ಬಜೆಟ್‌ ಮಂಡಿಸಿದ್ದಾರೆ. ಅನುಭವ ಹೊಂದಿರುವ ಮುಖ್ಯಮಂತ್ರಿಯವರಿಗೆ ಹಣ ಯಾವ ರೀತಿ ಖರ್ಚು‌ಮಾಡಬೇಕು, ಯಾವ ರೀತಿ ಅಭಿವೃದ್ಧಿ ಕೈಗೊಳ್ಳಬೇಕು ಎಂಬ ಅರಿವಿರುವುದಿಲ್ಲವೇ? ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಂದ ವಿಪಕ್ಷದವರ ಟೀಕೆ-ಟಿಪ್ಪಣಿಗಳು ನಗಣ್ಯವಾಗಿವೆ.
ತುಮಕೂರಿನ ಸಮಗ್ರ ಅಭಿವೃದ್ಧಿ ಆಗಬೇಕಿರುವ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಮಾದರಿಯಲ್ಲಿ ಗ್ರೇಟರ್ ತುಮಕೂರು ಘೋಷಿಸಬೇಕೆಂಬ ಪ್ರಸ್ತಾವನೆ ಸಲ್ಲಿಸಲಾಗುವುದು.
ತುಮಕೂರು ನಗರದಲ್ಲಿ ಬಹು ಕಾಲದಿಂದ ನಾಗರಿಕರಿಗೆ ನಿವೇಶನಗಳ ಹಂಚಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ 6 ತಿಂಗಳೊಳಗಾಗಿ 2 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ನೆನೆಗುದಿಗೆ ಬಿದ್ದಿರುವ 2ನೇ ಹಂತದ ಒಳಚರಂಡಿ ಯೋಜನೆ ಕಾಮಗಾರಿಗಳು ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ಶೀಘ್ರವೇ ಪೂರ್ಣಗೊಳ್ಳಲಿವೆ ಎಂದು ತಿಳಿಸಿದೆ.