
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ರೂಪಿಸಲಾಯಿತು. ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಲ್ಲ, ಇದು ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ. ಕೇಸರಿ ಬಣ್ಣವು ಶಕ್ತಿ, ಸ್ಥೈರ್ಯ ಹಾಗೂ ತ್ಯಾಗವನ್ನು ಪ್ರತಿಬಿಂಬಿಸುತ್ತದೆ. ಬಿಳಿಬಣ್ಣ ಶಾಂತಿ ಮತ್ತು ಸತ್ಯವನ್ನು ಪ್ರತಿನಿಧಿಸಿದರೆ, ಹಸಿರು ಸಮೃದ್ಧಿಯನ್ನು ಬಿಂಬಿಸುತ್ತದೆ. ಅಶೋಕ ಚಕ್ರ ನಿರಂತರವಾಗಿ ದೇಶದ ಆರ್ಥಿಕತೆಯನ್ನು ಹಾಗೂ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದರ ಸಂಕೇತವಾಗಿದೆ.

ನಮ್ಮ ರಾಷ್ಟ್ರದ ತ್ರಿವರ್ಣ ಧ್ವಜವನ್ನು ಗೌರವಿಸಿ, ಹೆಮ್ಮೆಯಿಂದ ಕಾಣಬೇಕು. ಪ್ರತಿಯೊಬ್ಬರೂ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು. ಈ ಸಂದರ್ಭದಲ್ಲಿ ರಾಷ್ಟ್ರಕ್ಕಾಗಿ ತ್ಯಾಗ – ಬಲಿದಾನ, ಹೋರಾಟ ಮಾಡಿದವರನ್ನು ಸ್ಮರಿಸುವುದು ಅಗತ್ಯ. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ ಹೋರಾಟ ನಡೆಯಿತು. ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧೀಜಿ ವಹಿಸಿದ್ದರು. ಇದು ನಡೆದು ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಕೆಳದ ವರ್ಷ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಸುವರ್ಣಸೌಧದ ಪಕ್ಕದಲ್ಲಿ ಸ್ಥಾಪಿಸಲಾಗಿದೆ.
