ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಧಿಕಾರಿಗಳ ವಿಶ್ಲೇಷಣಾ ವರದಿಯ ಪ್ರಕಾರ, ಟ್ಯಾಟೂಗೆ ಬಳಸುವ ಇಂಕ್‌ನಲ್ಲಿ 22 ಹೆವಿ ಮೆಟಲ್‌ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಈ ಟ್ಯಾಟೂ ಇಂಕ್ ನಲ್ಲಿರುವ ಮೈಕ್ರೋ ಆರ್ಗ್ಯಾನಿಸಮ್ ಮತ್ತು ಹೆವಿ ಮೆಟಲ್ಸ್ ಚರ್ಮದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದರಿಂದ ಅನೇಕ ಚರ್ಮ ರೋಗಗಳು ಉಂಟಾಗುತ್ತವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಅವರು ಫೆ.28 ರಂದು ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್‌ ಹಾಗೂ ಹಸಿರು ಬಟಾಣಿಗೆ ಬಳಸುವ ಬಣ್ಣದಲ್ಲಿ ಕ್ಯಾನ್ಸರ್‌ ಕಾರಕ ಅಂಶಗಳು (Carcinogenicity Element) ಪತ್ತೆಯಾದ ಬೆನ್ನಲ್ಲೇ ಸಚಿವರು ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಅವರ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟಕ್ಕಾಗಿ ಸರಬರಾಜಾಗುತ್ತಿರುವ ಔಷಧಗಳ ಮತ್ತು ಕಾಂತಿವರ್ಧಕ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳುವುದು ಮತ್ತು ಉತ್ತಮ ಗುಣಮಟ್ಟದ, ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧಗಳನ್ನು ನಿಯಂತ್ರಿತ ಬೆಲೆಗಳಲ್ಲಿ ಗ್ರಾಹಕರಿಗೆ ದೊರಕುವಂತೆ ಮಾಡುವುದೇ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಮುಖ್ಯ ಉದ್ದೇಶವಾಗಿರುತ್ತದೆ.

ಔಷಧ ಆಡಳಿತ ವಿಭಾಗದ ಅಮಲು ಜಾರಿ ಅಧಿಕಾರಿಗಳಿಂದ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಜನವರಿ 2025ರಲ್ಲಿ 1,133 ಔಷಧಗಳ ಮಾದರಿಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ. ಅವುಗಳಲ್ಲಿ 938 ಉತ್ತಮ ಗುಣಮಟ್ಟದ ಔಷಧಗಳೆಂದು, 106 ಉತ್ತಮ ಗುಣಮಟ್ಟವಿಲ್ಲದ ಔಷಧಿಗಳೆಂದು ಘೋಷಿತವಾಗಿದೆ. ಫೆಬ್ರವರಿ ತಿಂಗಳಲ್ಲಿ 1,841 ಔಷಧ ಮಾದರಿಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ. ಇಲ್ಲಿಯವರೆಗೆ 58 ಮಾದರಿಗಳು ಅನುತ್ತಮ ಗುಣಮಟ್ಟದ ಔಷಧಿಗಳೆಂದು ಘೋಷಿತವಾಗಿದೆ ಎಂದು ವಿವರಿಸಿದರು.

2024ರ ಡಿಸೆಂಬರ್‌ನಲ್ಲಿ ಕಾಂತಿವರ್ಧಕಗಳ ಗುಣಮಟ್ಟವನ್ನು ಪರೀಕ್ಷಿಸಲು ಇಂದಿನವರೆಗೆ 262 ಕಾಂತಿವರ್ಧಕ ಮಾದರಿಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ. ಅವುಗಳಲ್ಲಿ 120 ಉತ್ತಮ ಗುಣಮಟ್ಟದ ಕಾಂತಿವರ್ಧಕಗಳೆಂದು ಘೋಷಿತವಾಗಿದೆ. ಉಳಿದ ಮಾದರಿಗಳು ವಿಶ್ಲೇಷಣಾ ಹಂತದಲ್ಲಿರುತ್ತದೆ ಎಂದರು.

ಟ್ಯಾಟೂ ಅನ್‌ಸೇಫ್‌:
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಧಿಕಾರಿಗಳು ಟ್ಯಾಟೂ ಹಾಕಲು ಉಪಯೋಗಿಸುವ ಇಂಕ್ ಅನ್ನು ಮಾರುಕಟ್ಟೆಯಿಂದ ಪಡೆದು ವಿಶ್ಲೇಷಣೆ ನಡೆಸಲಾಗಿದೆ. ವಿಶ್ಲೇಷಣಾ ವದರಿಯ ಪ್ರಕಾರ ಟ್ಯಾಟೂನಲ್ಲಿ 22 ಹೆವಿ ಮೆಟಲ್‌ ಇರುವುದು ಕಂಡುಬಂದಿದೆ. ಇದು ಔಷಧ ಮತ್ತು ಕಾಂತಿವರ್ಧಕ ಅಧಿನಿಯಮಗಳ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ. ಈ ಟ್ಯಾಟು ಇಂಕ್ ನಲ್ಲಿರುವ ಮೈಕ್ರೋ ಆರ್ಗ್ಯಾನಿಸಮ್ ಮತ್ತು ಹೆವಿ ಮೆಟಲ್ಸ್ ಚರ್ಮದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದರಿಂದ ಅನೇಕ ಚರ್ಮ ರೋಗಗಳು ಉಂಟಾಗುತ್ತವೆ. ಈ ಕುರಿತು ನಿಯಮಗಳನ್ನು ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿರುವುದರಿಂದ ಕ್ರಮ ಜರುಗಿಸಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಿದರು.

ಅಲ್ಲದೇ ರಿಂಗರ್ ಲ್ಯಾಕ್ಟೇಟ್ ದ್ರಾವಣಕ್ಕೆ ಸಂಬಂಧಿಸಿದಂತೆ 246 ಬ್ಯಾಚ್‌ನ ಮಾದರಿಗಳಲ್ಲಿ 113 ಅನುತ್ತಮ ಗುಣಮಟ್ಟದೆಂದು ಘೋಷಿತವಾಗಿದೆ. ಈ ಸಂಬಂಧ ತಯಾರಿಕಾ ಸಂಸ್ಥೆಯಾದ ಪಶ್ಚಿಮ್‌ಬಂಗಾ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ 9 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇನ್ನುಳಿದ ಅನುತ್ತಮ ಗುಣಮಟ್ಟದ 25 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲು ಅನುಮತಿ ನೀಡಲಾಗಿದ್ದು, ಮೊಕದ್ದಮೆ ಹೂಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.