ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಡೆಟ್‌ (HAL) 45,000 ಕೋಟಿ ರೂ. ಟೆಂಡರ್‌ ಪಡೆದುಕೊಂಡಿದೆ. ರಕ್ಷಣಾ ಸಚಿವಾಲಯವು ಭಾರತೀಯ ವಾಯು ಸೇನೆಗೆ 156 ಪ್ರಚಂಡ ಮಾದರಿಯ ಲಘು ಯುದ್ಧ ಹೆಲಿಕಾಪ್ಟರ್‌ಗಳ ಖರೀದಿಗೆ ಪ್ರಸ್ತಾವನೆ ಸಲ್ಲಿದೆ. ಈ ಮೂಲಕ ರಕ್ಷಣಾ ವಲಯದಲ್ಲಿ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡಿದೆ.

2015ರ ನಿಯಮಾವಳಿ 30ರ ಪ್ರಕಾರ, 156 ಲಘು ಯುದ್ಧ ಹೆಲಿಕಾಪ್ಟರ್‌ಗಳ ಖರೀದಿಗಾಗಿ ರಕ್ಷಣಾ ಸಚಿವಾಲಯವು ಪ್ರಸ್ತಾವನೆಗಾಗಿ ವಿನಂತಿ (RFP) ನೀಡಿದೆ. ಈ ಪೈಕಿ ಭಾರತೀಯ ಸೇನೆಗೆ 90 ಮತ್ತು ಭಾರತೀಯ ವಾಯು ಸೇನೆ 66 ಲಘು‌ ಯುದ್ಧ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಇದರ ವೆಚ್ಚ 45,000 ಕೋಟಿ ರೂ.ಗಳಷ್ಟಾಗಲಿದೆ ಎಂದು ಹೇಳಲಾಗಿದೆ.

ಪ್ರಸ್ತುತ ಈ ಎರಡೂ ಸೇನೆಗಳು 15 ಹೆಲಿಕಾಪ್ಟರ್‌ಗಳನ್ನು ಹೊಂದಿವೆ. ಈ 156 ಲಘು ಯುದ್ಧ ವಿಮಾನಗಳನ್ನು ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ನಿಯೋಜಿಸಲಾಗುತ್ತದೆ. ಇದು ಭಯೋತ್ಪಾದಕರು ಮತ್ತು ನುಸುಳುಕೋರರನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಪ್ರಚಂಡ ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಯನ್ನು ಸುಗಮಗೊಳಿಸುತ್ತವೆ. ಶತ್ರುಗಳನ್ನು ಹುಡುಕಿ ಕೊಲ್ಲುವ ಜೊತೆಗೆ ಬಂಕರ್‌ಗಳ ಬಸ್ಟಿಂಗ್‌ ಕಾರ್ಯಾಚರಣೆಗೂ ಸಹಾಯಕವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ

ಪ್ರಚಂಡ್‌ʼ ಹೇಲಿಕಾಪ್ಟರ್‌ 5,000 ಮೀಟರ್ (16,400 ಅಡಿ) ಎತ್ತರದಲ್ಲಿ ಲ್ಯಾಂಡಿಂಗ್‌ ಮತ್ತು ಟೇಕಾಫ್‌ ಮಾಡುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಸಿಯಾಚಿನ್ ಹಿಮನದಿ ಮತ್ತು ಪೂರ್ವ ಲಡಾಖ್‌ ನಂತಹ ಎತ್ತರದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಸೂಕ್ತವಾಗಿದೆ. ಪ್ರತಿಕೂಲ ವಾತಾವರಣದಲ್ಲಿಯೂ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಶತ್ರುಗಳ ವಾಯು ರಕ್ಷಣಾ ಕಾರ್ಯಾಚರಣೆಯನ್ನು ನಾಶಪಡಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ರಕ್ಷಣಾ ಸಚಿವಾಲಯವು ಹೆಚ್‌ಎಎಲ್‌ಗೆ 65,000 ಕೋಟಿ ರೂ. ಮೌಲ್ಯದ 97 LCA ಮಾರ್ಕ್ 1A ಫೈಟರ್ ಜೆಟ್‌ಗಳನ್ನು ಖರೀದಿಸಲು ಟೆಂಡರ್ ನೀಡಿದೆ.