ಮಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳು (Private Educational Institutions) ಸರ್ಕಾರಿ ಶಾಲೆಗಳನ್ನು (Govt Schools) ದತ್ತು ಪಡೆಯುವ ಸರ್ಕಾರದ ಪ್ರಸ್ತಾವನೆಗೆ ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಹೋರಾಟಗಾರ ಪ್ರಕಾಶ್ ಅಂಚನ್ (Prakash Anchan) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮಾಜಮುಖಿ ಸಂಘ-ಸಂಸ್ಥೆಗಳು, ಶಿಕ್ಷಣ ಪ್ರೇಮಿಗಳು, ದಾನಿಗಳು ಹಾಗೂ ಜನಪ್ರತಿನಿಧಿಗಳು ದತ್ತು ಪಡೆಯುವುದು ಸ್ವಾಗತಾರ್ಹ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವುದರಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಗೊಂದಲಗಳು ಉಂಟಾಗುವ ಸಾಧ್ಯತೆ ಇದೆ, ಇದು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: PM-RAHAT ಯೋಜನೆಯಡಿ ಅಪಘಾತಕ್ಕೊಳಗಾದವರನ್ನು ದಾಖಲಿಸಿಕೊಳ್ಳಲು ಮತ್ತು ಚಿಕಿತ್ಸೆ ನೀಡಲು ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕ್ಯಾಪ್ಟನ್ ಚೌಟ ಸೂಚನೆ.
ಖಾಸಗಿ ಶಾಲೆಗಳ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ನಿಯೋಜಿಸಿದರೆ ಅವರ ಸೇವಾ ನಿಯಮ, ತರಬೇತಿ, ಆಡಳಿತಾತ್ಮಕ ನಿಯಂತ್ರಣ ಹಾಗೂ ಬೋಧನಾ ವಿಧಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಉದ್ಭವಿಸಲಿದ್ದು, ಇದರ ಪರಿಣಾಮ ಮಕ್ಕಳ ಶಿಕ್ಷಣದ ಮೇಲೂ ಬೀಳಬಹುದು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ ಶಿಕ್ಷಣ ತಜ್ಞರು, ಶಿಕ್ಷಕರು ಹಾಗೂ ಸಾರ್ವಜನಿಕರೊಂದಿಗೆ ಸಮಗ್ರ ಚರ್ಚೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.
ಈಗಾಗಲೇ ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವ ಹಲವು ಸಂಘ-ಸಂಸ್ಥೆಗಳು ಸರ್ಕಾರದ ಕಠಿಣ ನಿಯಮಗಳಿಂದ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಂತಹ ಸಂಘ-ಸಂಸ್ಥೆಗಳಿಗೆ ನಿಯಮಗಳಲ್ಲಿ ಸೂಕ್ತ ಸಡಿಲಿಕೆ ಹಾಗೂ ಅಗತ್ಯ ಪ್ರೋತ್ಸಾಹ ನೀಡಿದರೆ ಇನ್ನಷ್ಟು ಸಂಸ್ಥೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಸ್ತಾವನೆ ಸರ್ಕಾರ ತನ್ನ ಶಿಕ್ಷಣದ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳ ಕಡೆಗೆ ವರ್ಗಾಯಿಸುತ್ತಿರುವ ಸಂದೇಶ ನೀಡುವಂತಿದೆ. ಶಿಕ್ಷಣದ ಹಕ್ಕು ಕಾಯ್ದೆಯಂತೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಮೂಲಭೂತ ಜವಾಬ್ದಾರಿಯಾಗಿದ್ದು, ಖಾಸಗಿ ಶಾಲೆಗಳಿಗೆ ದತ್ತು ನೀಡುವ ಬದಲು ಸರ್ಕಾರಿ ಶಾಲೆಗಳನ್ನು ಮತ್ತಷ್ಟು ಬಲಪಡಿಸುವತ್ತ ಸರ್ಕಾರ ಗಮನಹರಿಸಬೇಕು ಎಂದು ಪ್ರಕಾಶ್ ಅಂಚನ್ ಒತ್ತಾಯಿಸಿದ್ದಾರೆ.
