ಆರು ಯಂತ್ರ, ಡೈಗಳು ಹಾಗೂ ನಕಲಿ ನಾಣ್ಯಗಳ ವಶ

ಲಕ್ನೋ: ಉತ್ತರ ಪ್ರದೇಶದ ಸಹರನ್‌ಪುರದಲ್ಲಿ 70 ಕೋಟಿಗೂ ಅಧಿಕ ಮೌಲ್ಯದ ನಕಲಿ ನಾಣ್ಯಗಳನ್ನು ಮಾರುಕಟ್ಟೆಗೆ ಹರಿಬಿಟ್ಟಿದ್ದ ಗ್ಯಾಂಗ್‌ನ್ನು ಪೊಲೀಸರು ಭೇದಿಸಿದ್ದಾರೆ.

ನಗರ ಕೊತ್ವಾಲಿ ಪೊಲೀಸರು, ಎಸ್‌ಒಜಿ ಹಾಗೂ ಸರ್ವೆಲೆನ್ಸ್ ತಂಡದ ಕಾರ್ಯಾಚರಣೆಯಲ್ಲಿ ಗ್ಯಾಂಗ್‌ನ ಪ್ರಮುಖ ಆರೋಪಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಬಂಧಿತರಿಂದ 1.28 ಲಕ್ಷ ಮೌಲ್ಯದ ನಕಲಿ ನಾಣ್ಯಗಳು, ಆರು ಯಂತ್ರಗಳು, 39 ಡೈಗಳು, ಕಾರು ಹಾಗೂ ಇತರೆ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರ ಪ್ರಕಾರ, ಬಂಧಿತರು ಹರಿಯಾಣದ ಸೋನಿಪತ್‌ನಲ್ಲಿ ನಕಲಿ ನಾಣ್ಯಗಳನ್ನು ತಯಾರಿಸಿ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿ ಚಲಾವಣೆ ಮಾಡುತ್ತಿದ್ದರು. ಮಾರುಕಟ್ಟೆಗಳು, ಸರ್ಕಾರಿ ಮದ್ಯದಂಗಡಿಗಳು ಹಾಗೂ ಟೋಲ್‌ಪ್ಲಾಜಾಗಳಲ್ಲಿ ನಕಲಿ ನಾಣ್ಯಗಳನ್ನು ಚಲಾಯಿಸುತ್ತಿದ್ದುದಾಗಿ ವಿಚಾರಣೆಯಲ್ಲಿ ತಿಳಿಸಿದ್ದಾರೆ.

2001ರಿಂದ ನಕಲಿ ನಾಣ್ಯ ದಂಧೆ
ಗ್ಯಾಂಗ್‌ನ ಪ್ರಮುಖ ಆರೋಪಿ ಪಂಜಾಬ್‌ನ ಮೊಹಾಲಿ ನಿವಾಸಿ ಉಪಕಾರ್ ಲೂಥ್ರಾ ಅಲಿಯಾಸ್ ಅಭಯ್ ಪ್ರತಾಪ್ ಸಿಂಗ್ 2001ರಿಂದಲೇ ನಕಲಿ ನಾಣ್ಯ ತಯಾರಿಸುವ ದಂಧೆಯಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಮೊದಲು ಅಕ್ಕಸಾಲಿಗನಾಗಿದ್ದರಿಂದ ನಾಣ್ಯ ತಯಾರಿಕೆಯ ಬಗ್ಗೆ ಪರಿಣತಿ ಹೊಂದಿದ್ದ ಎನ್ನಲಾಗಿದೆ. 2017ರಲ್ಲಿ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಆತನ ವಿರುದ್ಧ 1 ಲಕ್ಷ ರೂ. ಬಹುಮಾನವನ್ನೂ ಘೋಷಿಸಲಾಗಿತ್ತು.

ತಿಹಾರ್ ಜೈಲಿನಲ್ಲಿದ್ದ ವೇಳೆ ಆರೋಪಿ ಹಿಮಾಂಶು ಅಲಿಯಾಸ್ ಗುಲ್ಲು ಜೊತೆ ಆತನ ಪರಿಚಯವಾಗಿದ್ದು, ಜೈಲಿನಲ್ಲೇ ನಕಲಿ ನಾಣ್ಯ ದಂಧೆ ಮುಂದುವರಿಸುವ ಯೋಜನೆ ರೂಪಿಸಿದ್ದರು. 2021ರಲ್ಲಿ ಜೈಲಿನಿಂದ ಹೊರಬಂದ ಬಳಿಕ ಇಬ್ಬರೂ ಸೇರಿ ಗ್ಯಾಂಗ್ ಕಟ್ಟಿಕೊಂಡಿದ್ದರು. ಸಹರನ್‌ಪುರದಲ್ಲೂ ನಕಲಿ ನಾಣ್ಯ ತಯಾರಿಕಾ ಘಟಕ ಸ್ಥಾಪಿಸಲು ಸಿದ್ಧತೆ ನಡೆಸುತ್ತಿದ್ದಾಗಲೇ ಪೊಲೀಸರು ಜಾಲವನ್ನು ಪತ್ತೆಹಚ್ಚಿದ್ದಾರೆ.

ಒಂದು ನಾಣ್ಯ ತಯಾರಿಕೆಗೆ 5 ರೂ ವೆಚ್ಚ
ಪೊಲೀಸರ ತನಿಖೆಯ ಪ್ರಕಾರ, 20 ರೂ. ಮುಖಬೆಲೆಯ ಒಂದು ನಕಲಿ ನಾಣ್ಯ ತಯಾರಿಸಲು ಸುಮಾರು 5 ರೂ. ವೆಚ್ಚವಾಗುತ್ತಿತ್ತು. 4,000 ರೂ. ಮೌಲ್ಯದ ನಕಲಿ ನಾಣ್ಯಗಳನ್ನು ಮಾರುಕಟ್ಟೆಯಲ್ಲಿ ಚಲಾಯಿಸಿದರೆ ಗ್ಯಾಂಗ್ ಸದಸ್ಯರಿಗೆ 400 ರೂ. ಕಮಿಷನ್ ಸಿಗುತ್ತಿತ್ತು ಎನ್ನಲಾಗಿದೆ. ಇದುವರೆಗೆ ಸುಮಾರು 3.5 ಕೋಟಿ ನಕಲಿ ನಾಣ್ಯಗಳನ್ನು ತಯಾರಿಸಿರುವುದಾಗಿ ತನಿಖೆಯಲ್ಲಿ ಅಂದಾಜಿಸಲಾಗಿದೆ.

ಈ ನಾಣ್ಯಗಳ ತಯಾರಿಕೆಗೆ ಸುಮಾರು 17.50 ರೂ. ಕೋಟಿ ವೆಚ್ಚವಾಗಿದ್ದು, ಅವುಗಳಿಂದ ಸುಮಾರು 52.50 ರೂ. ಕೋಟಿ ಲಾಭ ಗಳಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಲೆಕ್ಕ ಹಾಕಿದ್ದಾರೆ. ಒಟ್ಟಾರೆ 70 ರೂ. ಕೋಟಿಗೂ ಅಧಿಕ ಮೌಲ್ಯದ ನಕಲಿ ನಾಣ್ಯಗಳನ್ನು ಮಾರುಕಟ್ಟೆಯಲ್ಲಿ ಚಲಾಯಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಬಂಧಿತರನ್ನು ಉಪಕಾರ್ ಲೂಥ್ರಾ ಅಲಿಯಾಸ್ ಅಭಯ್ ಪ್ರತಾಪ್ ಸಿಂಗ್, ಹಿಮಾಂಶು ಅಲಿಯಾಸ್ ಗುಲ್ಲು, ಕುಲದೀಪ್, ಸಂತೋಷ್ ಚೌರಾಸಿಯಾ ಅಲಿಯಾಸ್ ಜನಾರ್ದನ್, ಅನುರಾಗ್ ಪಾಲ್ ಅಲಿಯಾಸ್ ಲಂಕೇಶ್ ಎಂದು ಗುರುತಿಸಿದೆ.

ಬಂಧಿತರ ಅಕ್ರಮ ಆಸ್ತಿ ಹಾಗೂ ಗ್ಯಾಂಗ್‌ನ ಆರ್ಥಿಕ ಚಟುವಟಿಕೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಅಪರಾಧದಿಂದ ಗಳಿಸಿದ ಆಸ್ತಿ ಪತ್ತೆಯಾದರೆ ಜಪ್ತಿ ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದು ಸಹರನ್‌ಪುರ ಎಸ್‌ಎಸ್‌ಪಿ ಅಭಿನಂದನ್ ತಿಳಿಸಿದ್ದಾರೆ.