ಬಂಟ್ವಾಳ, ಜು. 4: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ಪದಾಧಿಕಾರಿಗಳ ಸಭೆಯು ಶನಿವಾರ ಬೆಳಿಗ್ಗೆ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ಮಂಡಲ ಅಧ್ಯಕ್ಷರಾದ ಆರ್. ಚೆನ್ನಪ್ಪ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಇದನ್ನೂ ಓದಿ : ರಾಜಸ್ಥಾನಕ್ಕೆ ಮಹತ್ವದ ಅಭಿವೃದ್ಧಿ ಕೊಡುಗೆ: ಪಚ್ಪದ್ರಾ ರಿಫೈನರಿ ಹಾಗೂ ಜೋಧ್ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ

ಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವಾರ್, ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಎಸ್‌ಐಆರ್ ಜಿಲ್ಲಾ ಪ್ರಭಾರಿ ಅಪ್ಪಯ್ಯ ಮಣಿಯಾನಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ ಹಾಗೂ ಶಿವಪ್ರಸಾದ್ ಶೆಟ್ಟಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಯುವ ಮತದಾರರು ಹಾಗೂ ಮಹಿಳಾ ಕಾರ್ಯಕರ್ತರೇ ಪಕ್ಷದ ಪ್ರಮುಖ ಶಕ್ತಿಯಾಗಿದ್ದು, ಅವರ ಸಕ್ರಿಯ ಭಾಗವಹಿಸುವಿಕೆಯಿಂದ ಸಂಘಟನೆ ಇನ್ನಷ್ಟು ಬಲಗೊಳ್ಳಲಿದೆ ಎಂದು ಹೇಳಿದರು.

ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯವನ್ನು ಪ್ರತಿಯೊಂದು ಬೂತ್‌ನಲ್ಲಿ ಪರಿಣಾಮಕಾರಿಯಾಗಿ ನಡೆಸಿ, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯನ್ನು ಕಾಂಗ್ರೆಸ್ ಸರ್ಕಾರ ವ್ಯವಸ್ಥಿತವಾಗಿ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ, ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಮಂಡಲ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಮಾತನಾಡಿ, ಪ್ರತಿಯೊಬ್ಬ ಪದಾಧಿಕಾರಿಯೂ ತನಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ, ಮಂಡಲದ ಕಾರ್ಯಕ್ರಮಗಳನ್ನು ಬೂತ್ ಮಟ್ಟದವರೆಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷದ ಸಂಘಟನೆ ಬಲವರ್ಧನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಖಡಕ್ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ದೇವದಾಸ್ ಶೆಟ್ಟಿ ಎಸ್‌ಐಆರ್ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಮಹಿಳಾ ಮೋರ್ಚಾ ಕಾರ್ಯದರ್ಶಿ ಜಯಶ್ರೀ ಅಶೋಕ್ ವಂದೇ ಮಾತರಂ ಹಾಡಿದರು. ಮಂಡಲ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡು ಕಾರ್ಯಕ್ರಮ ಸಂಯೋಜಿಸಿದರು. ಬಿಜೆಪಿ ಬಂಟ್ವಾಳ ಯುವ ಮೋರ್ಚಾ ಕಾರ್ಯದರ್ಶಿ ಸಂಪತ್ ಕುಮಾರ್ ಕಡೇಶಿವಾಲಯ ಕಾರ್ಯಕ್ರಮ ನಿರೂಪಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಸ್ವಾಗತಿಸಿದರು. ಶಿವಪ್ರಸಾದ್ ಶೆಟ್ಟಿ ವಂದಿಸಿದರು.

ವರದಿ :ಸಾಮಾಜಿಕ ಜಾಲತಾಣ ಬಿಜೆಪಿ ಬಂಟ್ವಾಳ