ಬಂಟ್ವಾಳ: ಬಿ.ಸಿ.ರೋಡ್‌ನಲ್ಲಿರುವ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು. ಈ ವೇಳೆ ವಿವಿಧ ಭಾಗಗಳಿಂದ ಆಗಮಿಸಿದ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಶಾಸಕರ ಗಮನಕ್ಕೆ ತಂದರು.ಮಂಗಳೂರು | ಪ್ರೀತಿ ಹೆಸರಲ್ಲಿ ಗರ್ಭಿಣಿಯಾಗಿಸಿ ವಂಚನೆ ಆರೋಪ – ಡೆತ್‌ನೋಟ್ ಬರೆದಿಟ್ಟು ಬಾಲಕಿ ಆತ್ಮಹತ್ಯೆ

ಬಿ.ಸಿ.ರೋಡ್ ಆಟೋ ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದ ನಿಯೋಗವು ಬಸ್ ನಿಲ್ದಾಣದಲ್ಲಿ ಪ್ರಸ್ತುತ ಇರುವ ಎರಡು ಆಟೋ ರಿಕ್ಷಾ ಪಾರ್ಕಿಂಗ್ ಸ್ಥಳಗಳು ಸಾಕಾಗುತ್ತಿಲ್ಲ ಎಂದು ತಿಳಿಸಿ, ಸಾರ್ವಜನಿಕರ ಅನುಕೂಲ ಹಾಗೂ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿ ಇನ್ನೂ ಎರಡು ಪಾರ್ಕಿಂಗ್ ಸ್ಥಳಗಳನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿತು. ಮನವಿ ಸ್ವೀಕರಿಸಿದ ಶಾಸಕರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅದೇ ವೇಳೆ, ಬಂಟ್ವಾಳ ಪುರಸಭೆಯ ಕಿರು ನೀರು ಸರಬರಾಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಬಾಕಿ ಉಳಿದಿರುವ ಸಂಬಳದ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರಲಾಯಿತು. ಸಮಸ್ಯೆಯ ಗಂಭೀರತೆಯನ್ನು ಅರಿತ ಶಾಸಕ ರಾಜೇಶ್ ನಾಯ್ಕ್ ಅವರು ಪುರಸಭೆಯ ಮುಖ್ಯಾಧಿಕಾರಿಗೆ ತಕ್ಷಣವೇ ಬಾಕಿ ವೇತನ ಪಾವತಿಗೆ ಅಗತ್ಯ ಕ್ರಮ ಕೈಗೊಂಡು ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಶಂಭೂರು ನಿವಾಸಿ ವಿಶೇಷ ಚೇತನರಾದ ತನುಷ್ ಕುಲಾಲ್ ಹಾಗೂ ಗೂಡಿನಬಳಿ ಮಹಮ್ಮದ್ ಶರೀಫ್ ಅವರಿಗೆ ಶಾಸಕರು ಕೃತಕ ಕಾಲುಗಳನ್ನು ವಿತರಿಸಿ, ಅವರ ಸ್ವಾವಲಂಬಿ ಜೀವನಕ್ಕೆ ಶುಭ ಹಾರೈಸಿದರು.

ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ಶೀಘ್ರ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಾಜೇಶ್ ನಾಯ್ಕ್ ಈ ಸಂದರ್ಭದಲ್ಲಿ ತಿಳಿಸಿದರು.