ರೇಷ್ಮೆ ಕೃಷಿ ಮೇಲೆ 1.50 ಲಕ್ಷ ಕುಟುಂಬಗಳು ಅವಲಂಬಿಸಿದ್ದು, ರೇಷ್ಮೆ ಲಾಭದಾಯಕವಾದ ಕಸುಬು. ಅದಕ್ಕಾಗಿಯೇ ಹೆಚ್ಚು ಜನ ವ್ಯವಸಾಯದ ಜೊತೆಗೆ ಉಪಕಸುಬು ಮಾಡಬೇಕು. ಕೃಷಿಯಿಂದ ವಿಮುಖರಾಗುತ್ತಿರುವ ಯುವಜನಾಂಗವನ್ನು ಪುನ: ಸೆಳೆಯಲು ರೇಷ್ಮೆ, ತೋಟಗಾರಿಕೆ, ಪಶುಸಂಗೋಪನೆಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದರು.
ಅವರು ಬೆಂಗಳೂರಿನ ಓಕಳೀಪುರಂನಲ್ಲಿ ರೇಷ್ಮೆ ಮತ್ತು ಖನಿಜ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ನಂತರ ಇ-ರೇಷ್ಮೆ ಪೋರ್ಟಲನ್ನು ಲೋಕಾರ್ಪಣೆಗೊಳಿಸಿ, ಮಾತನಾಡಿದರು.
ಬೈವೋಲ್ಟೀನ್ ರೇಷ್ಮೆಗೆ ಬೇಡಿಕೆ ಹೆಚ್ಚಾಗಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ ಸಾಗಾಣಿಕೆ ವೆಚ್ಚವನ್ನು 10 ರಿಂದ 20 ರೂ.ಗಳಿಗೆ ಹೆಚ್ಚಿಸಲಾಗಿದೆ ಮತ್ತು ಬೈವೋಲ್ಟೀನ್ ಬೆಳೆಯಲು ಹೆಚ್ಚಿನ ನೆರವನ್ನು ನೀಡಲು ಸರ್ಕಾರ ಬದ್ಧವಾಗಿದೆ. ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನ ಹಾಗೂ ಕಾಫಿ ಉತ್ಪಾದನೆಯಲ್ಲಿಯೂ ಮೊದಲ ಸ್ಥಾನದಲ್ಲಿದ್ದೇವೆ. ಒಂದು ದಿನಕ್ಕೆ 1 ಕೋಟಿ ಲೀ. ಹಾಲು ಉತ್ಪಾದನೆಯಾಗುತ್ತದೆ, 1.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆ ಹಾಕಲಾಗಿದೆ.
ಓಕಳೀಪುರಂನಲ್ಲಿರುವ 4 ಎಕರೆ 25 ಗುಂಟೆ ವಿಸ್ತೀರ್ಣದ ಈ ಸ್ಥಳ ರೇಷ್ಮೆ ಇಲಾಖೆಗೆ ಸೇರಿದ್ದು, 1995 ರಲ್ಲಿ ಇದನ್ನು ಖರೀದಿಸಲಾಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೇಷ್ಮೆ ಭವನದ ಅಗತ್ಯತೆಯನ್ನು ಮನಗಂಡು ಸ್ಥಳವನ್ನು ರೇಷ್ಮೆ ಇಲಾಖೆ ಕೊಟ್ಟು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೇರಿದ ಮೈಸೂರು ಖನಿಜ ಕಾರ್ಪೋರೇಷನ್ ವತಿಯಿಂದ ಭವನ ನಿರ್ಮಾಣ ಮಾಡುವುದು ಎಂದು ತೀರ್ಮಾನಿಸಿ ಈ ಕ್ರಮ ಕೈಗೊಳ್ಳಲಾಗಿದೆ. ರೇಷ್ಮೆ ಇಲಾಖೆಯ ಅಭಿವೃದ್ಧಿಯ ದೃಷ್ಟಿಯಿಂದ ಅಗತ್ಯವಿರುವಷ್ಟು ಸ್ಥಳವನ್ನು ಬಳಸಿಕೊಂಡು ಇತರೆ ಇಲಾಖೆಗಳಿಗೂ ಸ್ಥಳಾವಾಕಾಶವನ್ನು ಮಾಡಿಕೊಡುವಂತೆ ಸೂಚಿಸಲಾಗಿದೆ.
ರೂ. 666.75 ಕೋಟಿಗಳಿಗೆ ಟೆಂಡರ್ ಆಗಿದ್ದು, ಮೂರು ವರ್ಷಗಳ ಅವಧಿಯಲ್ಲಿ ಕಟ್ಟಡ ನಿರ್ಮಾಣವಾಗಬೇಕು, 13 ಅಂತಸ್ತಿನ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಿದ್ದು, ಕಟ್ಟಡ ಸದೃಢವಾಗಿರಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಮೂರು ವರ್ಷಗಳ ಕಾಲಮಿತಿಯಲ್ಲಿ ಕಟ್ಟಡ ಮುಗಿಯದಿದ್ದರೆ ಕ್ರಮ ಕ್ರಮವಹಿಸಲಾಗುವುದು ಎಂದು ಎಚ್ಚರಿಕೆಯನ್ನು ಅವರಿಗೆ ನೀಡಲಾಗಿದೆ ಎಂದರು.
 ಈ ಸಂದರ್ಭದಲ್ಲಿ   ಸಚಿವರಾದ ದಿನೇಶ್ ಗುಂಡೂರಾವ್, ಕೆ.ವೆಂಕಟೇಶ್, ಖನಿಜ ನಿಗಮದ ಅಧ್ಯಕ್ಷರಾದ ಜಿ.ಎಸ್.ಪಾಟೀಲ್, ಉಪಾಧ್ಯಕ್ಷರಾದ ಹೆಚ್.ಲಕ್ಷ್ಮಣ್, ರೇಷ್ಮೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.