ನವದೆಹಲಿ: ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ 23ನೇ ದಿನ ಕಂಡಿದೆ. ಇರಾನ್ ಹಾರ್ಮುಜ್‌ ಜಲಸಂಧಿಯನ್ನ (Strait of Hormuz) ವಿರೋಧಿಗಳಿಗೆ ಬಂದ್ ಮಾಡಿರೋ ಕಾರಣ ಜಗತ್ತಿನಾದ್ಯಂತ ತೈಲ, ಅನಿಲಕ್ಕೆ ಹಾಹಾಕಾರ ಎದ್ದಿದೆ. ಈ ಮಧ್ಯೆ ಇಂಧನ ಪೂರೈಕೆಯನ್ನು (Energy Supply) ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆ ನಡೆಸಲಾಗುತ್ತಿದೆ. ಇದನ್ನೂ ಓದಿ :  ಕಡೇಶಿವಾಲಯ ಗ್ರಾಮದ ಬದಿಗುಡ್ಡೆ ದೈವಸ್ಥಾನದ ಸಂಪರ್ಕ ರಸ್ತೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಅನುದಾನದಡಿ 5 ಲಕ್ಷ ಮೊತ್ತದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲೋಕಕಲ್ಯಾಣ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಸಾಯನಿಕ ಮತ್ತು ರಸಗೊಬ್ಬರ ಮತ್ತು ಆರೋಗ್ಯ ಸಚಿವ ಜೆ.ಪಿ ನಡ್ಡಾ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ (Natural Gas) ಸಚಿವ ಹರ್ದೀಪ್ ಸಿಂಗ್ ಪುರಿ, ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಇತರ ಹಿರಿಯ ಸಚಿವರು ಮತ್ತು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದಾರೆ.

ಮಧ್ಯಪ್ರಾಚ್ಯದ ಉದ್ವಿಗ್ನತೆ ಗಮನದಲ್ಲಿಟ್ಟುಕೊಂಡು ಪೆಟ್ರೋಲಿಯಂ, ಕಚ್ಚಾ ತೈಲ, ಅನಿಲ, ವಿದ್ಯುತ್‌ ಮತ್ತು ರಸಗೊಬ್ಬರ ವಲಯಗಳ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಅಲ್ಲದೇ ದೇಶಕ್ಕೆ ತೈಲ, ಅನಿಲ ಮತ್ತು ರಸಗೊಬ್ಬರಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ನಿರಂತರ ಪೂರೈಕೆ ಕಾಯ್ದುಕೊಳ್ಳುವ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆಯೂ ಈ ಬಗ್ಗೆ ಮಾತನಾಡಿದ್ದ ಪ್ರಧಾನಿ ಮೋದಿ, ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಇಂಧನ ಬಿಕ್ಕಟ್ಟಿಗೆ ಕಾರಣವಾಗಿದೆ. ಇದರ ನಡುವೆಯೂ ತೈಲ, ಅನಿಲ ಮತ್ತು ರಸಗೊಬ್ಬರಗಳ ನಿರಂತರ ಪೂರೈಕೆಯನ್ನು ನಿರ್ವಹಿಸಲು ಸರ್ಕಾರ ಈಗಾಗಲೇ ಪೂರ್ವಭಾವಿ ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದರು.

ರಾಜ್ಯಗಳಿಗೆ 20% ಗ್ಯಾಸ್ ಸಿಲಿಂಡರ್ ಹೆಚ್ಚುವರಿ ಸಪ್ಲೈ
ಒಂದು ದಿನದ ಹಿಂದಷ್ಟೇ ಕೇಂದ್ರ ಸರ್ಕಾರ ಹೋಟೆಲ್‌ಗಳಿಗೆ ಗುಡ್‌ನ್ಯೂಸ್ ನೀಡಿದೆ. ಕೇಂದ್ರದಿಂದ ರಾಜ್ಯಗಳಿಗೆ 20% ಗ್ಯಾಸ್ ಸಿಲಿಂಡರ್ ಹೆಚ್ಚುವರಿ ಸಪ್ಲೈ ಆಗಲಿದೆ. ಹೋಟೆಲ್, ಡಾಬಾ, ರೆಸ್ಟೋರೆಂಟ್, ಇಂಡಸ್ಟ್ರಿಯಲ್ ಕ್ಯಾಂಟಿನ್, ಡೈರಿ, ಕಮ್ಯುನಿಟಿ ಕಿಚನ್‌ಗೆ ಸಿಲಿಂಡರ್ ಸಪ್ಲೈ ಆಗಲಿದ್ದು, ಎರಡು ವಾರಗಳಿಂದ ಪರದಾಟಕ್ಕೆ ಕೊಂಚ ರಿಲೀಫ್ ಸಿಗಲಿದೆ.