ತಮಿಳುನಾಡಿನ ಮೂಲಸೌಕರ್ಯ ಮತ್ತು ಆರ್ಥಿಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಪರಿವರ್ತನಾತ್ಮಕ ಅಭಿವೃದ್ಧಿ ಯೋಜನೆಗಳ ಸರಣಿಯನ್ನು ಉದ್ಘಾಟಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಐತಿಹಾಸಿಕ ನಗರವಾದ ತಿರುಚ್ಚಿಗೆ ಭೇಟಿ ನೀಡಿದರು. ಒಟ್ಟು ಐದು ಸಾವಿರದ ಆರುನೂರು ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ, ಈ ಉಪಕ್ರಮಗಳು ಶುದ್ಧ ಇಂಧನ, ಪೆಟ್ರೋಲಿಯಂ ಸಂಬಂಧಿತ ಉತ್ಪಾದನೆ ಮತ್ತು ಹೆದ್ದಾರಿಗಳು, ರೈಲ್ವೆಗಳು ಮತ್ತು ಗ್ರಾಮೀಣ ರಸ್ತೆಗಳ ಮೂಲಕ ವರ್ಧಿತ ಬಹು-ಮಾದರಿ ಸಂಪರ್ಕ ವಿಸ್ತರಣೆಯ ಉದ್ದೇಶಗಳನ್ನು ಒಳಗೊಂಡಿವೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, “ಈ ಯೋಜನೆಗಳು ಇಂಧನ ಲಭ್ಯತೆ ಸಂಪರ್ಕವನ್ನು ಹೆಚ್ಚಿಸುತ್ತವೆ ಮತ್ತು ತಮಿಳುನಾಡಿನ ಯುವಜನರಿಗೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತವೆ” ಎಂದು ಒತ್ತಿ ಹೇಳಿದರು.
ಸುಸ್ಥಿರ ಇಂಧನದ ಮೇಲೆ ಗಮನ ಕೇಂದ್ರೀಕರಿಸಿದ ಪ್ರಧಾನಮಂತ್ರಿ, ಭಾರತ್ ಪೆಟ್ರೋಲಿಯಂನ ನಗರ ಅನಿಲ ವಿತರಣಾ (ಸಿಜಿಡಿ) ಜಾಲಕ್ಕೆ ಅಡಿಪಾಯ ಹಾಕಿದರು. ಈ ₹3,700 ಕೋಟಿ ಯೋಜನೆಯು ಸುಮಾರು ಒಂಬತ್ತು ಲಕ್ಷ ಕುಟುಂಬಗಳು ಮತ್ತು ಹಲವಾರು ವಾಣಿಜ್ಯ ಘಟಕಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲವನ್ನು (ಪಿಎನ್ಜಿ) ಒದಗಿಸಿ ನೀಲಗಿರಿ ಮತ್ತು ಈರೋಡ್ ಜಿಲ್ಲೆಗಳನ್ನು ಪರಿವರ್ತಿಸಲು ಸಜ್ಜಾಗಿದೆ. ಇದರ ಪರಿಸರ ಸಂಬಂಧಿ ಪ್ರಯೋಜನಗಳನ್ನು ಎತ್ತಿ ತೋರಿಸುತ್ತಾ, ಶ್ರೀ ಮೋದಿ, “ಕೇವಲ ಎಂಟು ವರ್ಷಗಳಲ್ಲಿ ಈ ಯೋಜನೆಯ ಸಕಾರಾತ್ಮಕ ಪರಿಸರ ಪರಿಣಾಮವು ನಾಲ್ಕು ಕೋಟಿ ಮರಗಳನ್ನು ನೆಡುವುದಕ್ಕೆ ಸಮನಾಗಿರುತ್ತದೆ ” ಎಂಬುದರತ್ತ ಗಮನ ಸೆಳೆದರು.
ಚೆನ್ನೈನಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ನ ಲ್ಯೂಬ್ ಬ್ಲೆಂಡಿಂಗ್ ಪ್ಲಾಂಟ್ (ಲ್ಯೂಬ್ ಮಿಶ್ರಣ ಘಟಕ) ಅನ್ನು ದೇಶಕ್ಕೆ ಸಮರ್ಪಿಸುವುದು ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಬಲಪಡಿಸುವ ಮಹತ್ವದ ಕ್ರಮವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. .
ಈ ಪ್ರದೇಶದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವಂತೆ , ಪ್ರಧಾನ ಮಂತ್ರಿಯವರು ಗಂಗೈಕೊಂಡ ಚೋಳಪುರಂನಲ್ಲಿ ಹೊಸ ಹೆದ್ದಾರಿ ಬೈಪಾಸ್ ಯೋಜನೆಯನ್ನು ಘೋಷಿಸಿದರು. ಈ ಯೋಜನೆಯು ಯುನೆಸ್ಕೋ ಮಾನ್ಯತೆ ಪಡೆದ ಮತ್ತು ಚಕ್ರವರ್ತಿ ರಾಜೇಂದ್ರ ಚೋಳ ಅವರಿಂದ ನಿರ್ಮಿಸಲ್ಪಟ್ಟ ಭವ್ಯ ದೇವಾಲಯದ ಪ್ರದೇಶವನ್ನು ವಾಹನ ದಟ್ಟಣೆಯಿಂದ ಮುಕ್ತ ಮಾಡುವ, ಅದನ್ನು ಬೇರೆಡೆಗೆ ತಿರುಗಿಸುವ ಮೂಲಕ ದೇವಾಲಯವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ, ಇದು ಸ್ಮಾರಕ ಮತ್ತು ಅದರ ಸಂದರ್ಶಕರ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಹೊಸ ಮೂಲಸೌಕರ್ಯದ ಬಗ್ಗೆ ಉಲ್ಲೇಖಿಸಿದ ಶ್ರೀ ಮೋದಿ “ಇದರರ್ಥ ಎಲ್ಲರಿಗೂ ಉತ್ತಮ ಸುರಕ್ಷತೆ “ಎಂದೂ ಹೇಳಿದರು.
ಭಾಷಣದ ಮುಕ್ತಾಯದಲ್ಲಿ ಪ್ರಧಾನಮಂತ್ರಿಯವರು ಅಮೃತ ಭಾರತ ಕಾರ್ಯಕ್ರಮದಡಿಯಲ್ಲಿ ಎಂಟು ನಿಲ್ದಾಣಗಳ ಇತ್ತೀಚಿನ ಆಧುನೀಕರಣ ಮತ್ತು ಪುನರಾಭಿವೃದ್ಧಿಯ ನಂತರ ರಾಜ್ಯದ ಸಾರಿಗೆ ಕ್ಷೇತ್ರದಲ್ಲಿ ಆಗಿರುವ ತ್ವರಿತ ಆಧುನೀಕರಣವನ್ನು ಎತ್ತಿ ತೋರಿಸಿದರು. ಪ್ರವಾಸೋದ್ಯಮ ಮತ್ತು ಸ್ಥಳೀಯ ವ್ಯಾಪಾರವನ್ನು ಉತ್ತೇಜಿಸಲು ನಾಗರಕೋಯಿಲ್, ಕೊಯಮತ್ತೂರು, ರಾಮೇಶ್ವರಂ, ತಿರುನಲ್ವೇಲಿ, ಮೈಲಾಡುತುರೈ, ಕಾರೈಕ್ಕುಡಿಯಂತಹ ಪ್ರಮುಖ ಸ್ಥಳಗಳನ್ನು ಇತರ ಪ್ರದೇಶಗಳೊಂದಿಗೆ ಸಂಪರ್ಕಿಸುವ ಹೊಸ ರೈಲು ಸೇವೆಗಳಿಗೆ ಇಂದು ಚಾಲನೆ ನೀಡಲಾಯಿತು. ರಾಜ್ಯದ ಭವಿಷ್ಯದ ಬಗ್ಗೆ ತಮ್ಮ ಚಿಂತನೆ/ ದೃಷ್ಟಿಕೋನವನ್ನು ಪುನರುಚ್ಚರಿಸಿದ , ಶ್ರೀ ಮೋದಿ, “ನಾವು ರಾಜ್ಯದ ಪ್ರಗತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ” ಎಂದು ಹೇಳಿದರು.
