ಬಂಟ್ವಾಳ: ಶಬರಿಮಲೆ ಯಾತ್ರೆ ಕೈಗೊಂಡು ದೇವರ ದರ್ಶನ ಮುಗಿಸಿ ಮನೆಗೆ ಹಿಂದಿರುಗುವ ವೇಳೆ ಲಾರಿ ಡಿಕ್ಕಿಯಾಗಿ ಬಂಟ್ವಾಳದ ವೃತಧಾರಿ ಬಾಲಕನೋರ್ವ ಮೃತಪಟ್ಟ ಘಟನೆ ಕೇರಳ ರಾಜ್ಯದ ಕ್ಯಾಲಿಕಟ್ ಸಮೀಪದ ಕೋಟೆಕಲ್ ಎಂಬಲ್ಲಿ ಶುಕ್ರವಾರ ತಡರಾತ್ರಿ ವೇಳೆ ನಡೆದಿದೆ.

ಕುರಿಯಾಳ ಗ್ರಾಮದ ದುರ್ಗಾನಗರ ಸಮೀಪದ ಕೊಪ್ಪಳ ನಿವಾಸಿ ಅಶೋಕ್ ಪೂಜಾರಿ ಅವರ ಪುತ್ರ ಲಕ್ಮೀಶ ಪೂಜಾರಿ (15) ಲಾರಿ ಅಪಘಾತದಲ್ಲಿ ಮೃತಪಟ್ಟ ಬಾಲಕ.

ಇನ್ನೋವಾ ಕಾರಿನಲ್ಲಿದ್ದ ಬಂಟ್ವಾಳ ಮೂಲದ ಒಟ್ಟು 7 ಮಂದಿ ಅಯ್ಯಪ್ಪ ಮಾಲಾಧಾರಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ವರದರಾಜ್ ಎಂಬವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಸಿದ್ದಕಟ್ಟೆ ಶಾಲೆಯ 9 ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಲಕ್ಷ್ಮೀಶ ಆತನ ತಂದೆ ಅಶೋಕ್ ಪೂಜಾರಿ ಜೊತೆ ಶಬರಿಮಲೆಗೆ ಇನ್ನೋವಾ ಕಾರಿನಲ್ಲಿ ತೆರಳಿದ್ದರು. ಒಟ್ಟು ಒಂಬತ್ತು ಮಂದಿ ಕಾರಿನಲ್ಲಿ ತೆರಳಿದ್ದು, ದೇವರ ದರ್ಶನ ಮುಗಿಸಿ ವಾಪಸು ಬರುತ್ತಿದ್ದ ವೇಳೆ ಕೊಟೆಕಲ್ ಎಂಬಲ್ಲಿ ಇವರ ಕಾರು ಕೆಟ್ಟುಹೋಗಿದೆ ಎಂಬ ಕಾರಣಕ್ಕಾಗಿ ಕಾರಿನ ಎದುರು ಬೊನೆಟ್ ಓಪನ್ ಮಾಡಿ ಕಾರು ರಿಪೇರಿಯಲ್ಲಿ ತೊಡಗಿದ್ದರು.

ಸುಮಾರು 2 ಗಂಟೆ ವೇಳೆಗೆ ಯಮಸ್ವರೂಪಿ ಲಾರಿಯೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿ ರಿಪೇರಿ ಮಾಡುತ್ತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎಲ್ಲರೂ ರಸ್ತೆಗೆ ಎಸೆಯಲ್ಪಟ್ಟಿದ್ದು, ಬಾಲಕ ಲಕ್ಷ್ಮೀಶ ಲಾರಿಯಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.