ಶಿವಮೊಗ್ಗ: ತ್ಯಾವರೆಕೊಪ್ಪ ಮೃಗಾಲಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವನ್ಯಜೀವಿಯೊಂದಕ್ಕೆ ಚಿಕಿತ್ಸೆ ನೀಡಲು ಹೋಗಿದ್ದ ಪಶುವೈದ್ಯೆಯೊಬ್ಬರ ಮೇಲೆ ಪ್ರಾಣಿ ದಾಳಿ ಮಾಡಿದ್ದು, ಈ ದುರಂತದಲ್ಲಿ ಗಂಭೀರ ಗಾಯಗೊಂಡ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಹಿಪೋಪೋಟೋಮಸ್ ಅಥವಾ ನೀರಾನೆ ದಾಳಿಗೆ ಯುವ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಪ್ರಾಣ ಕಳೆದುಕೊಂಡಿದ್ದಾರೆ. ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ವನ್ಯಜೀವಿಗೆ ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ಈ ದುರಂತ ನಡೆದಿದೆ.

ಕರ್ತವ್ಯದ ವೇಳೆ ಮೃತರಾದ ಪಶುವೈದ್ಯೆ ಡಾ ಸಮೀಕ್ಷಾ ರೆಡ್ಡಿ ಇತ್ತೀಚೆಗಷ್ಟೇ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದರು. ನಿನ್ನೆ ರಾತ್ರಿ 11.30ರ ಸಮಯದಲ್ಲಿ ವನ್ಯಜೀವಿ ನೀರಾನೆಗೆ ಚಿಕಿತ್ಸೆ ನೀಡಲು ತೆರಳಿದ್ದರು. ಈ ವೇಳೆ ನೀರಾನೆ, ವೈದ್ಯೆ ಸಮೀಕ್ಷಾ ಮೇಲೆ ಹಠಾತ್ ದಾಳಿ ಮಾಡಿದೆ. ಇದರಿಂದ ಗಂಭೀರ ಗಾಯಗೊಂಡ ವೈದ್ಯೆ ಸಮೀಕ್ಷಾ ಅವರನ್ನು ಕೂಡಲೇ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 6.30ರ ಸುಮಾರಿನಲ್ಲಿ ಅವರು ಸಾವನ್ನಪ್ಪಿದ್ದಾರೆ.

ಘಟನೆಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದು, ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಇದೊಂದು ದುರದೃಷ್ಟಕರ ಘಟನೆ ಈ ದುಃಖದ ಸಂದರ್ಭದಲ್ಲಿ ಮೃತ ವೈದ್ಯರ ಕುಟುಂಬದೊಂದಿಗೆ ಸರ್ಕಾರ ನಿಲ್ಲುತ್ತದೆ. ತಿಯೊಂದು ಜೀವವೂ ಅಮೂಲ್ಯ. ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಸಚಿವ ಖಂಡ್ರೆ ಹೇಳಿದ್ದಾರೆ.

ಮೃತ ಯುವ ವೈದ್ಯೆಯ ಕುಟುಂಬದವರಿಗೆ ನಿಯಮಾನುಸಾರ ಕೂಡಲೇ ಪರಿಹಾರ ನೀಡಲು ಸಚಿವರು ಸೂಚಿಸಿದ್ದು, ರಾಜ್ಯದ ಎಲ್ಲಾ ಮೃಗಾಲಯಗಳ ಪಶುವೈದ್ಯರು ಯಾವುದೇ ವನ್ಯಜೀವಿಗೆ ಚಿಕಿತ್ಸೆ ನೀಡುವಾಗ ಎಸ್.ಓ.ಪಿ. ಪಾಲಿಸಬೇಕು ಎಂಬ ಸ್ಪಷ್ಟ ಸೂಚನೆ ಇದೆ. ಈ ದುರಂತದ ಬಗ್ಗೆ ಹಿರಿಯ ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳ ಒಳಗೊಂಡ ತಂಡದಿಂದ ತನಿಖೆ ಮಾಡಲಾಗುವುದು ಈ ತಂಡಕ್ಕೆ 7 ದಿನಗಳ ಒಳಗಾಗಿ ವರದಿ ನೀಡುವಂತೆಯೂ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಮೃಗಾಲಯ ಪ್ರಾಧಿಕಾರದ ನಿರ್ದೇಶಕ ಅಮರಾಕ್ಷರ ಹೇಳಿಕೆ ನೀಡಿದ್ದು, ಡಾ. ಸಮೀಕ್ಷಾ ರೆಡ್ಡಿ ಫೆಬ್ರವರಿಯಲ್ಲಿ ಹುದ್ದೆಗೆ ಸೇರಿದ್ದರು. ಅವರು ತ್ಯಾವರೆಕೊಪ್ಪ ಮೃಗಾಲಯಕ್ಕೆ ಫಾಲೋ ಅಪ್ ಟ್ರೀಟ್ಮೆಂಟ್‌ಗೆ ಹೋಗಿದ್ದರು. ಎರಡು ಮೂರು ದಿನಗಳಲ್ಲಿ ಮರಿ ಹಾಕಲಿರುವ ನೀರಾನೆಯ ತಪಾಸಣೆ ಮಾಡಲು ತೆರಳಿದ್ದರು. ಆದರೆ ನೀರಾನೆ ಇದಕ್ಕಿದ್ದಂತೆ ಸಮೀಕ್ಷಾ ರೆಡ್ಡಿ ಮೇಲೆ ದಾಳಿ ನಡೆಸಿದೆ. ತಕ್ಷಣವೇ ಸಮೀಕ್ಷಾ ಅವರನ್ನುಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದೆವು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸಮೀಕ್ಷಾ ರೆಡ್ಡಿ ಸಾವನ್ನಪ್ಪಿದ್ದಾರೆ ಎಂದು ಶಿವಮೊಗ್ಗ ಮೃಗಾಲಯ ಪ್ರಾಧಿಕಾರದ ನಿರ್ದೇಶಕ ಅಮರಾಕ್ಷರ ಮಾಹಿತಿ ನೀಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಡಾ ಸಮೀಕ್ಷಾ ರೆಡ್ಡಿ ಸೋದರ ಮಾವ ರಾಜಶೇಖರ್ ಪ್ರತಿಕ್ರಿಯಿಸಿದ್ದು, ಸಮೀಕ್ಷಾ ರೆಡ್ಡಿ ಇಲ್ಲಿಗೆ ಬಂದು ಕೇವಲ ಒಂದು ತಿಂಗಳಾಗಿತ್ತು. ಹಿರಿಯ ಮೇಲ್ವಿಚಾರಕರ ಜೊತೆ ಆಕೆ ಕೆಲಸ ಮಾಡಬೇಕಿತ್ತು. ಮೊನ್ನೆ ಈ ಹುದ್ದೆಗೆ ಆಯ್ಕೆಯಾದಾಗ ಯಾರ ಮಾತು ಕೇಳದೆ ಇಲ್ಲಿಗೆ ಬಂದಿದ್ದರು. ಮಂಗಳೂರು ಮೃಗಾಲಯದಲ್ಲಿ ಕೆಲಸ ಮಾಡಿದ್ದ ಸಮೀಕ್ಷಾ ಅಲ್ಲಿಂದ ಇಲ್ಲಿಗೆ ಬಂದಿದ್ದರು. ಶೇಕಡಾ 100 ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ. ನಮ್ಮ ಮಕ್ಕಳ ಸ್ಥಿತಿ ಹೀಗಾಗಿದೆ, ಬೇರೆ ಮಕ್ಕಳಾದರೂ ಉಳಿಯಲಿ, ನಮ್ಮ ಮಕ್ಕಳಿಗಾಗಿದ್ದು ಬೇರೆಯವರಿಗೆ ಆಗುವುದು ಬೇಡ, ಎಷ್ಟು ನಿರ್ಲಕ್ಷ ಎಂದರೆ ನಾವು ಬರುವಾಗ ಲಿವರ್‌ಗೆ ಪೆಟ್ಟಾಗಿತ್ತು ಅದನ್ನೆಲ್ಲ ತೆಗೆದಿದ್ದಾರೆ. ಪ್ಪೋ ಫೋಟೋಮಸ್ ದಾಳಿಗೆ ಒಳಗಾಗಿದ್ದಾಳೆ. ಮೇಲೆ ಹತ್ತಿ ಬರುವಾಗ ದಾಳಿಗೆ ಒಳಗಾಗಿ ಸಾವನ್ನಪ್ಪಿದ್ದಾಳೆ ಎಂದು ಸಮೀಕ್ಷಾ ಮಾವ ರಾಜಶೇಖರ್ ರೆಡ್ಡಿ ಹೇಳಿದ್ದಾರೆ.

ಮತ್ತೊಂದು ವರದಿಯ ಪ್ರಕಾರ ಸಮೀಕ್ಷಾ ಅವರು ರಾತ್ರಿ ಪಕ್ಷಿಯೊಂದಕ್ಕೆ ಚಿಕಿತ್ಸೆ ನೀಡಲು ಹೋಗಿದ್ದರು. ಈ ವೇಳೆ ದೂರದಿಂದಲೇ ನೀರಾನೆಯ ಫೋಟೋ ತೆಗೆಯಲು ಹೋಗಿದ್ದಾಗ ಘಟನೆ ನಡೆದಿದೆ. ಫೋಟೋ ತೆಗೆದು ಏಣಿ ಹತ್ತುವಾಗ ನೀರಾನೆ ಓಡಿ ಬಂದು ದಾಳಿ ನಡೆಸಿದೆ.