ವೇಣೂರು: ಗ್ರಾಮೀಣ ಭಾಗದಲ್ಲಿ ಪ್ರಾರಂಭಗೊಂಡ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರ ಸಂಘವು ಇಂದು ಜಿಲ್ಲೆಯಲ್ಲಿ ಶಕ್ತಿವಂತ ಬ್ಯಾಂಕ್ ಆಗಿ ಪರಿವರ್ತನೆಯಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು.

ಅವರು ವೇಣೂರು ಮಹಾವೀರ ನಗರದ ಮಂಜುಶ್ರೀ ಕಾಂಪ್ಲೆಕ್ಸ್‌ ನಲ್ಲಿ ಜು.14ರಂದು ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 15ನೇ ವೇಣೂರು ಶಾಖೆ ಉದ್ಘಾಟಿಸಿ ಮಾತನಾಡಿ, ದೊಡ್ಡ ಮಟ್ಟದಲ್ಲಿ ಠೇವಣಿ ಇರಿಸಿ, ವ್ಯವಹಾರವ ಮಾಡಿಕೊಂಡು ಇಂದು ದೊಡ್ಡ ಮಟ್ಟದಲ್ಲಿ ಪರಿವರ್ತನೆಗೊಂಡಿದೆ. ಸಂಘದ ಸದಸ್ಯರು ಹಾಗೂ ಜನಸಾಮಾನ್ಯರು ಕೂಡ ಮೆಚ್ಚುವ ರೀತಿಯಲ್ಲಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನೇತೃತ್ವದಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಸಹಕಾರದಲ್ಲಿ ಸಂಘ ಕಾರ್ಯನಿರ್ವಹಿಸುತ್ತಿರುವು ಅಭಿನಂದನಾರ್ಹವಾಗಿದೆ.

ಶಾಸಕ ಹರೀಶ್ ಪೂಂಜ ಠೇವಣಿ ಪತ್ರ ವಿತರಿಸಿ ಮಾತನಾಡಿ, ಪ್ರತಿ ಶಾಖೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿ ಉದ್ಯೋಗ ನೀಡಿ ಮುನ್ನಡೆಯುತ್ತಿರುವುದು ಅಭಿನಂದನೀಯ. ಪ್ರಸ್ತುತ ಕಾಲಘಟ್ಟದಲ್ಲಿ ಜಿಲ್ಲೆಯಲ್ಲಿ ಮೂರ್ತೆದಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಉದ್ಯೋಗ, ಶಿಕ್ಷಣದ ಕಲ್ಪನೆ ನೀಡಿದ ಬ್ರಹ್ಮಶ್ರೀ ನಾರಾಯಣಗುರುಗಳ ಆಶೀರ್ವಾದದಿಂದ ಸಂಘ ಐವತ್ತು ಶಾಖೆಗಳನ್ನು ತೆರೆದು ಸಮಾಜದ ಆರ್ಥಿಕ ಶಕ್ತಿಯಾಗಲಿ. ಸಂಜೀವ ಪೂಜಾರಿ ರವರ ಸಮಾಜಮುಖಿ ಚಿಂತನೆ, ಆಡಳಿತ ಮಂಡಳಿ-ಸಿಬ್ಬಂದಿ ಪರಿಶ್ರಮದಿಂದ ಬ್ಯಾಂಕ್ ಉನ್ನತಿಯಾಗಿದೆ.

ನಾರಾಯಣ ಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಕಂಪ್ಯೂಟರ್ ವಿಭಾಗ ಉದ್ಘಾಟಿಸಿ ಮಾತನಾಡಿ, ಮೂರ್ತೆದಾರಿಕೆಗೆ ಪರ್ಯಾಯ ವ್ಯವಸ್ಥೆಯಿಂದಾಗಿ ಕುಲಕಸುಬು ಉಳಿಯುವಂತಾಗಿದೆ. ಮೂರ್ತೆದಾರರಿಗೆ ಸಹಕಾರಿ ಸಂಘದ ಮೂಲಕ ಸರರ್ಕಾರದ ಸವಲತ್ತು ಪಡೆಯಲು ಸಾಧ್ಯ. ಸಂಘ ಜನರ ವಿಶ್ವಾಸ ಗಳಿಸಿ, ಬೆಳೆದು ಉತ್ತಮ ಡಿವಿಡೆಂಡ್ ನೀಡುತ್ತಿದ್ದು ಪ್ರಾಮಾಣಿಕ ಸೇವೆಯಿಂದ ಮುನ್ನಡೆಯಲಿ ಎಂದು ನುಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಉಳಿತಾಯ ಖಾತೆ ಪುಸ್ತಕ ವಿತರಿಸಿ ಮಾತನಾಡಿ, ಮೂರ್ತೆದಾರರ ಸಂಕಷ್ಟಕ್ಕೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಂಘವು ಮುನ್ನಡೆಯಲಿ. ನಾರಾಯಣ ಗುರು ಜಯಂತಿಯನ್ನು ಆಚರಿಸಲು ಸರಕಾರ ಸೂಚಿಸಿರುವುದು ಸಂತಸದ ಸಂಗತಿ. ವೇಣೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘಕ್ಕೆ ೧೪ ಸೆಂಟ್ಸ್ ಜಾಗ ಮೂಂಜುರಾಗಿದೆ ಎಂದರು.

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತಸರ ಜಯರಾಮ ಶೆಟ್ಟಿ ಸೇಫ್ ಲಾಕರ್ ಉದ್ಘಾಟಿಸಿದರು.

ಜಿ.ಪಂ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ವೇಣೂರು ವಲಯ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ವೇಣೂರು ಜುಮ್ಮಾ ಮಸೀದಿ ಅಧ್ಯಕ್ಷ ಝಕ್ರಿಯಾ ಶುಭಹಾರೈಸಿದರು.

ಬೆಳ್ತಂಗಡಿ ಸಿಡಿಒ ಅಭಿವೃದ್ಧಿ ಅಧಿಕಾರಿ ಪ್ರತಿಮಾ, ವೇಣೂರು ಮರ‍್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಪೂಜಾರಿ, ಪ್ರಗತಿಪರ ಕೃಷಿಕ ಬಾಲಕೃಷ್ಣ ಶೆಟ್ಟಿ ರಾಯಿ, ಕಟ್ಟಡದ ಮಾಲೀಕ ಕೆ.ಉದಯ ಕುಮಾರ್ ಕಂಬಳಿ, ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ, ವಿಠಲ ಬೆಳ್ಳಾಡ ಚೇಳೂರು, ಅಶೋಕ್ ಪೂಜಾರಿ ಕೋಮಾಲಿ, ಗಿರೀಶ್ ಕುಮಾರ್ ಪರ‍್ವ, ಜಯಶಂಕರ್ ಕಾನ್ಸಾಲೆ, ಕೆ.ಸುಜಾತ ಎಂ, ವಾಣಿ ವಸಂತ್, ಅರುಣ್ ಕುಮಾರ್ ಎಂ, ಆಶಿಶ್ ಪೂಜಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಜಿ. ಉಪಸ್ಥಿತರಿದ್ದರು.

ನಿರ್ದೇಶಕ ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕಿ ವಿಜಯಾ ಕೆ. ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

ಸಂಘದಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಪ್ರಾಶಸ್ತ್ಯ-ಕೆ.ಸಂಜೀವ ಪೂಜಾರಿ
ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೂರ್ತೆದಾರಿಕೆ ಮಾಡುವ ಕುಲ ಕಸುಬುದಾರರ ಶ್ರೇಯೋಭಿವೃದ್ಧಿ ಹಾಗೂ ಅವರ ಆರ್ಥಿಕ ಜೀವನಮಟ್ಟ ಸುಧಾರಿಸುವ ಸದುದ್ದೇಶದೊಂದಿಗೆ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಸುಭಾಷ್ ನಗರದ ಬ್ರಹ್ಮಶ್ರೀ ನಾರಾಯಣ ಗುರುಮಂದಿರದಲ್ಲಿ ಪ್ರಾರಂಭಗೊಂಡಿತು. ೨೦೦೫ರಲ್ಲಿ ಬೊಳ್ಳಾಯಿಯಲ್ಲಿ ಬ್ಯಾಂಕಿಂಗ್ ವ್ಯವಹಾರ ಆರಂಭಿಸಿ ಇದೀಗ ೧೫ನೇ ಶಾಖೆ ವೇಣೂರಿನಲ್ಲಿ ತೆರೆದಿದೆ. ನಮ್ಮ ಸಂಘದಲ್ಲಿ ಸಿಇಒನಿಂದ ಹಿಡಿದು ಒಟ್ಟು ೪೦ ಮಂದಿ ಮಹಿಳಾ ಸಿಬ್ಬಂದಿ ಕರ‍್ಯಾಚರಿಸುತ್ತಿರುವುದು ಸಹಕಾರಿ ಸಂಘಗಳ ಇತಿಹಾಸದಲ್ಲಿ ರಾಜ್ಯದಲ್ಲೇ ಪ್ರಥಮ. ಆ ಮೂಲಕ ಮಹಿಳೆಯರ ಉದ್ಯೋಗ ಹಾಗೂ ಸ್ವಾವಲಂಬಿ ಬದುಕಿಗೆ ನಮ್ಮ ಸಂಘ ಅವಕಾಶ ನೀಡಿದೆ. ಮುಂದಿನ ದಿನದಲ್ಲಿ ೩ ಕೋ. ರೂ ಸಾಲ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನಲ್ಲಿ ಮುಚ್ಚುವ ಸ್ಥಿತಿಯಲ್ಲಿರುವ ಮೂರ್ತೆದಾರರ ಸೊಸೈಟಿಯನ್ನು ಗುರುತಿಸಿ ಪುನರುಜ್ಜಿವನಗೊಳಿಸುವ ಕಾರ್ಯ ಮೂರ್ತೆದಾರರ ಮಹಾಮಂಡಲದ ಸಹಕಾರದಲ್ಲಿ ಮಾಡಲಾಗುವುದು. ಇನ್ನಷ್ಟು ಹೊಸ ಶಾಖೆಗಳನ್ನು ತೆರೆಯುವ ಯೋಜನೆ ಸಂಘ ಹೊಂದಿದೆ ಎಂದು ಹೇಳಿದರು.