ತಮಿಳುನಾಡು : ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳಿಗೆ ಬೆಂಕಿ ತಗುಲಿದ್ದು, ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮೈಸೂರಿನಿಂದ ದರ್ಭಾಂಗಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಚೆನ್ನೈ ಸಮೀಪದ ತಿರುವಳ್ಳೂರು ಜಿಲ್ಲೆಯ ಕವರೈಪ್ಪೆಟ್ಟೈ ರೈಲು ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಎಕ್ಸ್‌ಪ್ರೆಸ್ ರೈಲಿನ ಪಾರ್ಸೆಲ್ ವ್ಯಾನ್‌ಗೆ ಬೆಂಕಿ ಹೊತ್ತಿಕೊಂಡಿದ್ದು, 19 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪ್ಯಾಸೆಂಜರ್ ರೈಲಿನ ಕನಿಷ್ಠ 12 ಬೋಗಿಗಳೂ ಹಳಿತಪ್ಪಿವೆ.

ತಮಿಳುನಾಡು ರೈಲು ಅಪಘಾತದ ಪರಿಶೀಲನೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಂತೆಯೇ, ರಾಜಕೀಯ ಆರೋಪದ ಆಟ ಪ್ರಾರಂಭವಾಗಿದೆ. ರೈಲು ಅಪಘಾತಗಳಿಗೆ ಕಡಿವಾಣ ಹಾಕಲು ಕೇಂದ್ರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಒತ್ತಾಯಿಸಿದ್ದಾರೆ. “ಕೇಂದ್ರ ಸರ್ಕಾರವು ರೈಲು ಅಪಘಾತಗಳನ್ನು ನಿಲ್ಲಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇತ್ತೀಚೆಗೆ ರೈಲು ಅಪಘಾತಗಳು ಹೆಚ್ಚಾಗಿವೆ” ಎಂದು ಅವರು ಆರೋಪಿಸಿದರು.

ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, “ಸಚಿವರು, ಶಾಸಕರು ಮತ್ತು ಸರ್ಕಾರಿ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗೆ ಸ್ಥಳದಲ್ಲೇ ಹಾಜರಿದ್ದು, ರಾಜ್ಯ ಸರ್ಕಾರದ ಪರವಾಗಿ, ತಕ್ಷಣವೇ 22 ಆಂಬ್ಯುಲೆನ್ಸ್ಗಳನ್ನು ಕಳುಹಿಸಲಾಗಿದೆ, ಯಾವುದೇ ಪ್ರಾಣಾಪಾಯವಾಗಿಲ್ಲ, ಗಾಯಾಳುಗಳಿಗೆ ಸ್ಟಾನ್ಲಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.