ಪ್ಯಾರಿಸ್: ಜುಲೈ 26ರಂದು ಆರಂಭಗೊಂಡ 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಹಬ್ಬ ಭಾನುವಾರ (ಇಂದು) ಮುಕ್ತಾಯಗೊಳ್ಳಲಿದೆ. ಈ ಮೂಲಕ 17 ದಿನಗಳ ಕ್ರೀಡಾ ಮಹಾ ಸಂಗಮಕ್ಕೆ ತೆರೆ ಬೀಳಲಿದೆ.

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಹಬ್ಬ
ಕಳೆದ ಜುಲೈ 26ರಂದು ಪ್ಯಾರಿಸ್‌ನ ಸೆನ್ ನದಿ ದಡದಲ್ಲಿ ಅದ್ಧೂರಿಯಾಗಿ ಆರಂಭವಾಗಿದ್ದ ಕ್ರೀಡಾಕೂಟಕ್ಕೆ ಸ್ಟೇಡ್ ಡೆ ಫ್ರಾನ್ಸ್ ಕ್ರೀಡಾಂಗಣದಲ್ಲಿ ತೆರೆ ಎಳೆಯಲಾಗುತ್ತದೆ. ಸಮಾರೋಪದಲ್ಲಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ಸಮಾರೋಪದಲ್ಲಿ ಕಲಾವಿದರು ಸಂಗೀತ ಪ್ರದರ್ಶನ ನೀಡಲಿದ್ದಾರೆ, ಅಲ್ಲದೇ ಲೇಸರ್ ಲೈಟ್ ಶೋ, ವೈಮಾನಿಕ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಲಿದೆ ಎಂಬುದಾಗಿ ಪ್ಯಾರಿಸ್ ಒಲಿಂಪಿಕ್ಸ್ ಸಂಘಟನಾ ಸಮಿತಿ ಹೇಳಿದೆ.

ಪ್ಯಾರಿಸ್‌ನ ಸೆನ್ ನದಿ ದಡದಲ್ಲಿ ಅದ್ಧೂರಿಯಾಗಿ ಆರಂಭವಾಗಿದ್ದ ಕ್ರೀಡಾಕೂಟ
ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆ ಸ್ಟೇಡ್ ಡೆ ಫ್ರಾನ್ಸ್ ಕ್ರೀಡಾಂಗಣದಲ್ಲಿ ಸಮಾರೋಪ ಆರಂಭಗೊಳ್ಳಲಿದ್ದು, ಸಂಜೆ 5:15 ರವರೆಗೆ ಇರಲಿದೆ. ಸಮಾರೋಪ ಸಮಾರಂಭ ಆಗಸ್ಟ್ 11ರಂದು ಭಾನುವಾರ ನಡೆಯಲಿದೆ. ʻದಿ ಟುನೈಟ್ ಶೋʼ ನಿರೂಪಕ ಜಿಮ್ಮಿ ಫಾಲನ್ ಮತ್ತು ದೀರ್ಘಕಾಲದ ಕ್ರೀಡಾ ನಿರೂಪಕ ಮೈಕ್ ಟಿರಿಕೊ ಈ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ.

ಪ್ರತಿ ರಾಷ್ಟ್ರದ ಕ್ರೀಡಾಪಟುಗಳು ತಮ್ಮ ಧ್ವಜದೊಂದಿಗೆ ಕ್ರೀಡಾಂಗಣಕ್ಕೆ ಬರಲಿದ್ದಾರೆ
ಸಮಾರೋಪ ಸಮಾರಂಭವು ಆಯಾ ದೇಶಗಳ ಧ್ವಜಗಳ ಪರೇಡ್ನೊಂದಿಗೆ ಪ್ರಾರಂಭವಾಗುತ್ತದೆ. ಇದರಲ್ಲಿ ಪ್ರತಿ ರಾಷ್ಟ್ರದ ಕ್ರೀಡಾಪಟುಗಳು ತಮ್ಮ ಧ್ವಜದೊಂದಿಗೆ ಕ್ರೀಡಾಂಗಣಕ್ಕೆ ಬರಲಿದ್ದಾರೆ. ಒಲಿಂಪಿಕ್ಸ್ ಹುಟ್ಟಿಕೊಂಡ ಗ್ರೀಸ್ ದೇಶದ ಹೆಗ್ಗುರುತಿಗಾಗಿ ಗ್ರೀಕ್ ಧ್ವಜವು ಮೆರವಣಿಗೆಯನ್ನು ಮುನ್ನಡೆಸಲಿದೆ. ಆತಿಥೇಯ ದೇಶವು ಕೊನೆಯಲ್ಲಿ ಸಾಗಲಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ತಿಳಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಾರೋಪ ಸಮಾರಂಭದಲ್ಲಿ ಪಿ.ಆರ್ ಶ್ರೀಜೇಶ್ ಮತ್ತು ಶೂಟರ್ ಮನು ಭಾಕರ್ ಅವರು ಭಾರತದ ಧ್ವಜ ಹೊತ್ತೊಯ್ಯಲಿದ್ದಾರೆ. ಉದ್ಘಾಟನೆ ಸಮಾರಂಭದಲ್ಲಿ ಅಥ್ಲಿಟ್ ಪಿ.ವಿ ಸಿಂಧು ಧ್ವಜಧಾರಿಯಾಗಿದ್ದರು.
ಒಲಿಂಪಿಕ್ಸ್ ಧ್ವಜ ಹಸ್ತಾಂತರ:
ಬೇಸಿಗೆ ಕ್ರೀಡಾಕೂಟದ ಪ್ರಸ್ತುತ ಆತಿಥೇಯ ನಗರದ ಮೇಯರ್ ಒಲಿಂಪಿಕ್ ಧ್ವಜವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರಿಗೆ ಹಸ್ತಾಂತರ ಮಾಡಲಿದ್ದಾರೆ. ನಂತರ 2028ರ ಕ್ರೀಡಾಕೂಟ ನಡೆಯಲಿರುವ ಹಿನ್ನೆಲೆ ಧ್ವಜವನ್ನು ಲಾಸ್ ಏಂಜಲೀಸ್ ಮೇಯರ್ ಕರೆನ್ ಬಾಸ್ ಅವರಿಗೆ ಹಸ್ತಾಂತರಿಸಲಾಗುತ್ತದೆ. ಪ್ರತಿ ವರ್ಷ ಒಲಿಂಪಿಕ್ಸ್ ಕೂಟ ಮುಗಿಯುತ್ತಿದ್ದಂತೆ ಮುಂದಿನ ಆಯೋಜಕ ರಾಷ್ಟ್ರಕ್ಕೆ ಧ್ವಜ ಹಸ್ತಾಂತರಿಸುವುದು ಸಂಪ್ರದಾಯ.