ಮನುಷ್ಯನ ಆಧುನಿಕ ಜೀವನ ಶೈಲಿಯಿಂದಾಗಿ ಪರಿಸರ ಮಾಲಿನ್ಯ ಉಂಟಾಗುತಿದ್ದು ಇದರಿಂದ ಓಝೋನ್ ಪದರ ಕ್ಷೀಣಿಸುತ್ತಿದೆ ಎಂದು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಯೋಗ ವರ್ಧನ್ ಡಿ.ಎಮ್ ಹೇಳಿದರು.
ಅವರು ಕಾಲೇಜಿನ ವಿಜ್ಞಾನ ವೇದಿಕೆ ಹಾಗು ಐ.ಕ್ಯೂ.ಎ.ಸಿ ಸಹಯೋಗದಲ್ಲಿ ನಡೆದ ವಿಶ್ವ ಓಝೋನ್ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರತಿ ವರ್ಷ ಸೆ. 16 ಅನ್ನು ವಿಶ್ವ ಓಜೋನ್ ದಿನ ಎಂದು ಆಚರಿಸಲಾಗುತ್ತಿದೆ.
ಓಜೋನ್ ಪದರದ ರಕ್ಷಣೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಕುರಿತಾಗಿ ಈ ದಿನವನ್ನುಆಚರಿಸಲಾಗುತ್ತಿದ್ದು, ಓಝೋನ್ ಪದರ ಭೂಮಿಯನ್ನು ಸೂರ್ಯನ ಶಾಖದಿಂದ ರಕ್ಷಿಸುವುದರ ಜೊತೆಗೆ ಭೂಮಂಡಲದಲ್ಲಿರುವ ಜೀವ ಸಂಕುಲವನ್ನು ರಕ್ಷಿಸುವ ಪದರವಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ಎಲ್ಲರೂ ಹೆಚ್ಚು ಗಿಡಮರಗಳನ್ನು ಬೆಳೆಸುವುದರ ಮೂಲಕ ಓಝೋನ್ ಪದರವನ್ನುಸಂರಕ್ಷಣೆ ಮಾಡೋಣ ಎಂದು ಕರೆ ನೀಡಿದರು.
ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿನಾಯಕ ಕೆ.ಎಸ್. ಸ್ವಾಗತಿಸಿ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕು| ಶ್ರೀದೇವಿಇವರು ವಂದಿಸಿ, ಕು| ಹೇಮಲತಾ ನಿರೂಪಿಸಿದರು.
ಓಝೋನ್ ದಿನದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಸುದರ್ಶನ್ ಬಿ. ಹಾಗೂ ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.