ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 41,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಸುಮಾರು 2000 ರೈಲ್ವೆ ಮೂಲಸೌಕರ್ಯ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ನೆರವೇರಿಸಿದರು. 500 ರೈಲ್ವೆ ನಿಲ್ದಾಣಗಳು ಮತ್ತು 1500 ಇತರ ಸ್ಥಳಗಳಿಂದ ಲಕ್ಷಾಂತರ ಜನರು ʻವಿಕಸಿತ ಭಾರತ-ವಿಕಸಿತ ರೈಲ್ವೆʼ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದಿನ ಕಾರ್ಯಕ್ರಮವು ʻನವ ಭಾರತʼದ ಹೊಸ ಕೆಲಸದ ಸಂಸ್ಕೃತಿಯ ಸಂಕೇತವಾಗಿದೆ ಎಂದರು. “ಭಾರತ ಇಂದು ಏನು ಮಾಡಿದರೂ, ಅದು ಅಭೂತಪೂರ್ವ ವೇಗ ಮತ್ತು ಗಾತ್ರದಲ್ಲಿ ಮಾಡುತ್ತದೆ. ನಾವು ದೊಡ್ಡ ಕನಸುಗಳನ್ನು ಕಾಣುತ್ತೇವೆ ಮತ್ತು ಅವುಗಳನ್ನು ಸಾಕಾರಗೊಳಿಸಲು ದಣಿವರಿಯದೆ ಕೆಲಸ ಮಾಡುತ್ತೇವೆ. ಈ ಸಂಕಲ್ಪವು ಈ ʻವಿಕಸಿತ ಭಾರತ-ವಿಕಸಿತ ರೈಲ್ವೆʼ ಕಾರ್ಯಕ್ರಮದಲ್ಲಿ ಗೋಚರಿಸುತ್ತದೆ,” ಎಂದು ಅವರು ಹೇಳಿದರು. ಇತ್ತೀಚೆಗೆ ಅಭೂತಪೂರ್ವ ವೇಗವನ್ನು ಪಡೆದ ಕೆಲಸಕಾರ್ಯಗಳ ಪ್ರಮಾಣವನ್ನು ಅವರು ಉಲ್ಲೇಖಿಸಿದರು. ಕಳೆದ ಕೆಲವು ದಿನಗಳಲ್ಲಿ ಜಮ್ಮು ಮತ್ತು ಗುಜರಾತ್‌ನಲ್ಲಿ ತಾವು ಪಾಲ್ಗೊಂಡ ಕಾರ್ಯಕ್ರಮಗಳನ್ನು ಉಲ್ಲೇಖಿಸಿದ ಅವರು, ಅಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳ ಬೃಹತ್ ವಿಸ್ತರಣೆಗೆ ಚಾಲನೆ ನೀಡಿದ್ದಾಗಿ ತಿಳಿಸಿದರು. ಅಂತೆಯೇ, ಇಂದು ಸಹ, 12 ರಾಜ್ಯಗಳ 300 ಜಿಲ್ಲೆಗಳಲ್ಲಿ ವ್ಯಾಪಿಸಿರುವ 550 ನಿಲ್ದಾಣಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ಉತ್ತರ ಪ್ರದೇಶದ ʻಗೋಮತಿ ನಗರ ನಿಲ್ದಾಣʼ ಯೋಜನೆ, 1500ಕ್ಕೂ ಹೆಚ್ಚು ರಸ್ತೆಗಳು ಮತ್ತು ಮೇಲ್ಸೇತುವೆ ಯೋಜನೆಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ʻನವ ಭಾರತʼದ ಮಹತ್ವಾಕಾಂಕ್ಷೆ ಹಾಗೂ ಸಂಕಲ್ಪದ ಅಗಾಧತೆ, ವೇಗವನ್ನು ಒತ್ತಿ ಹೇಳಿದರು.
ಇಂದು 40,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳು ಬೆಳಕನ್ನು ಕಾಣುತ್ತಿವೆ ಎಂದ ಪ್ರಧಾನಿ, ಕೆಲವು ತಿಂಗಳ ಹಿಂದೆ ʻಅಮೃತ ಭಾರತ ನಿಲ್ದಾಣʼ ಯೋಜನೆಯನ್ನು ಪ್ರಾರಂಭಿಸಿದ್ದನ್ನು ಸ್ಮರಿಸಿದರು. ಈ ಯೋಜನೆಯ ಭಾಗವಾಗಿ ದೇಶದ 500 ರೈಲ್ವೆ ನಿಲ್ದಾಣಗಳನ್ನು ಆಧುನೀಕರಿಸುವ ಕೆಲಸ ಪ್ರಾರಂಭವಾಗಿದೆ. ಇಂದಿನ ಕಾರ್ಯಕ್ರಮವು ಈ ಸಂಕಲ್ಪವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುತ್ತದೆ ಮತ್ತು ಭಾರತದ ಪ್ರಗತಿಯ ವೇಗದ ಒಂದು ಇಣುಕುನೋಟವನ್ನು ಒದಗಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದಿನ ರೈಲ್ವೆ ಯೋಜನೆಗಳಿಗಾಗಿ ಭಾರತದ ನಾಗರಿಕರನ್ನು ಅಭಿನಂದಿಸಿದರು.
ʻವಿಕಸಿತ ಭಾರತʼದ ನೈಜ ಫಲಾನುಭವಿಗಳು ಯುವಕರೇ ಆದ್ದರಿಂದ ಇಂದಿನ ಅಭಿವೃದ್ಧಿ ಯೋಜನೆಗಾಗಿ ಭಾರತದ ಯುವ ಶಕ್ತಿಯನ್ನು ಪ್ರಧಾನಿ ಮೋದಿ ಅವರು ವಿಶೇಷವಾಗಿ ಅಭಿನಂದಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳು ಲಕ್ಷಾಂತರ ಯುವಕರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಮತ್ತು ಶಾಲೆಗಳಲ್ಲಿ ಓದುವವರಿಗೂ ಪ್ರಯೋಜನವಾಗುತ್ತವೆ ಎಂದು ಅವರು ಹೇಳಿದರು. “ವಿಕಸಿತ ಭಾರತ ಹೇಗೆ ಅನಾವರಣಗೊಳ್ಳುತ್ತದೆ ಎಂದು ನಿರ್ಧರಿಸುವ ಗರಿಷ್ಠ ಹಕ್ಕು ಯುವಕರಿಗೆ ಇದೆ,” ಎಂದು ಪ್ರಧಾನಿ ಮೋದಿ ಉದ್ಗರಿಸಿದರು. ವಿವಿಧ ಸ್ಪರ್ಧೆಗಳ ಮೂಲಕ ʻವಿಕಸಿತ ಭಾರತʼದಲ್ಲಿ ರೈಲ್ವೆಯ ಕನಸುಗಳನ್ನು ನನಸಾಗಿಸಿದ್ದಕ್ಕಾಗಿ ಅವರು ಯುವಕರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ವಿಜೇತರನ್ನು ಅಭಿನಂದಿಸಿದರು. ಯುವಕರಿಗೆ ಅವರ ಕನಸುಗಳು, ಕಠಿಣ ಪರಿಶ್ರಮ ಹಾಗೂ ಪ್ರಧಾನಮಂತ್ರಿಯವರ ಸಂಕಲ್ಪವು ʻವಿಕಸಿತ ಭಾರತʼದ ಗ್ಯಾರಂಟಿಯನ್ನು ನೀಡುತ್ತದೆ ಎಂದು ಶ್ರೀ ಮೋದಿ ಭರವಸೆ ನೀಡಿದರು.
ಮುಂಬರುವ ʻಅಮೃತ ಭಾರತ ನಿಲ್ದಾಣʼಗಳು ವಿಕಾಸ ಮತ್ತು ಪರಂಪರೆ ಎರಡರ ಸಂಕೇತಗಳಾಗಲಿವೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಒಡಿಶಾದ ಬಾಲೇಶ್ವರ ನಿಲ್ದಾಣವನ್ನು ಭಗವಾನ್ ಜಗನ್ನಾಥ ದೇವಾಲಯದ ವಿಷಯಾಧಾರಿತವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಸಿಕ್ಕಿಂನ ರಂಗ್‌ಪುರ್ ನಿಲ್ದಾಣವು ಸ್ಥಳೀಯ ವಾಸ್ತುಶಿಲ್ಪದ ಛಾಪನ್ನು ಹೊಂದಿರುತ್ತದೆ, ರಾಜಸ್ಥಾನದ ಸಾಂಗ್‌ನರ್ ನಿಲ್ದಾಣವು 16ನೇ ಶತಮಾನದ ʻಹ್ಯಾಂಡ್-ಬ್ಲಾಕ್ʼ ಮುದ್ರಣವನ್ನು ಪ್ರದರ್ಶಿಸುತ್ತದೆ, ತಮಿಳುನಾಡಿನ ಕುಂಬಕೋಣಂನಲ್ಲಿರುವ ನಿಲ್ದಾಣವು ಚೋಳರ ವೈಭವವನ್ನು ಪ್ರದರ್ಶಿಸುತ್ತದೆ, ಅಹಮದಾಬಾದ್ ನಿಲ್ದಾಣವು ಮೊಧೇರಾ ಸೂರ್ಯ ಮಂದಿರದಿಂದ ಸ್ಫೂರ್ತಿ ಪಡೆದಿದೆ, ದ್ವಾರಕಾ ನಿಲ್ದಾಣವು ದ್ವಾರಕಾಧೀಶ ದೇವಾಲಯದಿಂದ ಸ್ಫೂರ್ತಿ ಪಡೆದಿದೆ ಎಂದು ಅವರು ಮಾಹಿತಿ ನೀಡಿದರು. ʻಐಟಿ ಸಿಟಿʼ ಗುರುಗ್ರಾಮದ ನಿಲ್ದಾಣವು ʻಐಟಿ ವಿಷಯಾಧಾರಿತʼ ವಿನ್ಯಾಸ ಹೊಂದಿರುತ್ತದೆ, ಇದರರ್ಥ “ಅಮೃತ ಭಾರತ ನಿಲ್ದಾಣವು ಆ ನಗರದ ವಿಶೇಷತೆಗಳನ್ನು ಜಗತ್ತಿಗೆ ಪರಿಚಯಿಸುತ್ತದೆ,” ಎಂದು ಪ್ರಧಾನಿ ಹೇಳಿದರು. ಈ ನಿಲ್ದಾಣಗಳು ದಿವ್ಯಾಂಗ ಮತ್ತು ಹಿರಿಯ ನಾಗರಿಕ ಸ್ನೇಹಿಯಾಗಿರುತ್ತವೆ ಎಂದು ಮಾಹಿತಿ ನೀಡಿದರು.
ಕಳೆದ 10 ವರ್ಷಗಳಲ್ಲಿ ʻವಿಕಸಿತ ಭಾರತʼ ನಿರ್ಮಾಣವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು, ವಿಶೇಷವಾಗಿ ಬದಲಾವಣೆ ಸ್ಪಷ್ಟವಾಗಿ ಗೋಚರಿಸುವ ರೈಲ್ವೆಯಲ್ಲಿ ಇದು ಸಾಧ್ಯವಾಗಿದೆ ಎಂದರು. ಒಂದು ಕಾಲದಲ್ಲಿ ಕೇವಲ ಕಲ್ಪನೆಯಾಗಿದ್ದ ಸೌಲಭ್ಯಗಳು ಈಗ ಕಳೆದ 10 ವರ್ಷಗಳಲ್ಲಿ ವಾಸ್ತವವಾಗಿವೆ ಎಂದು ಗಮನ ಸೆಳೆದ ಅವರು ʻವಂದೇ ಭಾರತ್ʼ, ʻಅಮೃತ್ ಭಾರತ್ʼ, ʻನಮೋ ಭಾರತ್ʼನಂತಹ ಆಧುನೀಕೃತ ಸೆಮಿ ಹೈಸ್ಪೀಡ್ ರೈಲುಗಳ ಉದಾಹರಣೆ ನೀಡಿದರು. ರೈಲು ಮಾರ್ಗಗಳ ಕ್ಷಿಪ್ರ ವಿದ್ಯುದ್ದೀಕರಣ, ರೈಲುಗಳ ಒಳಗೆ ಮತ್ತು ನಿಲ್ದಾಣದ ಪ್ಲಾಟ್ ಫಾರ್ಮ್‌ಗಳಲ್ಲಿ ಸ್ವಚ್ಛತೆಯ ಉದಾಹರಣೆಯನ್ನೂ ಅವರು ಮುಂದಿಟ್ಟರು. ಭಾರತೀಯ ರೈಲ್ವೆಯಲ್ಲಿ ಮಾನವರಹಿತ ರೈಲ್ವೆ ಕ್ರಾಸಿಂಗ್‌ಗಳು ಹೇಗೆ ಸಾಮಾನ್ಯವಾಗಿದ್ದವು ಮತ್ತು ಇಂದು ಮೇಲ್ಸೇತುವೆಗಳು ಹಾಗೂ ಕೆಳಸೇತುವೆಗಳು ಹೇಗೆ ತಡೆರಹಿತ ಹಾಗೂ ಅಪಘಾತ ಮುಕ್ತ ಸಂಚಾರವನ್ನು ಖಚಿತಪಡಿಸಿವೆ ಎಂದು ಅವರು ಹೋಲಿಕೆ ಮಾಡಿದರು. ವಿಮಾನ ನಿಲ್ದಾಣಗಳಲ್ಲಿನ ಆಧುನಿಕ ಸೌಲಭ್ಯಗಳನ್ನು ಈಗ ರೈಲ್ವೆ ನಿಲ್ದಾಣಗಳಲ್ಲಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು.
ಇಂದಿನ ರೈಲ್ವೆಯು ನಾಗರಿಕರಿಗೆ ಪ್ರಯಾಣವನ್ನು ಸುಲಭಗೊಳಿಸುವ ಪ್ರಮುಖ ಆಧಾರವಾಗಿದೆ ಎಂದು ಪ್ರಧಾನಿ ಹೇಳಿದರು. ರೈಲ್ವೆಯ ಪರಿವರ್ತನೆಯ ಬಗ್ಗೆ ಮತ್ತಷ್ಟು ವಿಷಯಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಭಾರತದ ಆರ್ಥಿಕತೆಯು ಜಾಗತಿಕ ಶ್ರೇಯಾಂಕದಲ್ಲಿ 11ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದ್ದು ಇದೇ ಹೊತ್ತಿನಲ್ಲಿ 10 ವರ್ಷಗಳ ಹಿಂದೆ 45 ಸಾವಿರ ಕೋಟಿ ರೂ. ಇದ್ದ ರೈಲ್ವೆ ಬಜೆಟ್ ಇಂದು 2.5 ಲಕ್ಷ ಕೋಟಿ ರೂ.ಗೆ ಭಾರಿ ಹೆಚ್ಚಳವಾಗಿದೆ ಎಂದರು. “ನಾವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಸೂಪರ್ ಪವರ್ ಆದಾಗ ನಮ್ಮ ಶಕ್ತಿ ಇನ್ನೆಷ್ಟು ಹೆಚ್ಚಾಗುತ್ತದೆ ಎಂದು ಊಹಿಸಿ. ಆದ್ದರಿಂದ, ಭಾರತವನ್ನು ಆದಷ್ಟು ಬೇಗ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಮೋದಿ ಶ್ರಮಿಸುತ್ತಿದ್ದಾರೆ,” ಎಂದು ಅವರು ಹೇಳಿದರು.
ಹಗರಣಗಳ ಅನುಪಸ್ಥಿತಿಯಿಂದಾಗಿ ಹಣವನ್ನು ಉಳಿಸಲಾಗಿದೆ ಮತ್ತು ಉಳಿಸಿದ ಹಣವನ್ನು ಹೊಸ ಮಾರ್ಗಗಳನ್ನು ಹಾಕುವ ವೇಗವನ್ನು ದ್ವಿಗುಣಗೊಳಿಸಲು, ಜಮ್ಮು ಮತ್ತು ಕಾಶ್ಮೀರದಿಂದ ಈಶಾನ್ಯಕ್ಕೆ ಹೊಸ ಪ್ರದೇಶಗಳಿಗೆ ಹಳಿಗಳನ್ನು ಕೊಂಡೊಯ್ಯಲು ಹಾಗೂ 2,500 ಕಿ.ಮೀ ವಿಶೇಷ ಸರಕು ಕಾರಿಡಾರ್ ಕೆಲಸಗಳಿಗಾಗಿ ಬಳಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ತೆರಿಗೆದಾರರ ಹಣದ ಪ್ರತಿ ಪೈಸೆಯನ್ನು ಪ್ರಯಾಣಿಕರ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ ಎಂದು ಅವರು ಹೇಳಿದರು. ಪ್ರತಿ ರೈಲ್ವೆ ಟಿಕೆಟ್ ಮೇಲೆ ಸರ್ಕಾರದಿಂದ ಶೇಕಡಾ 50 ರಷ್ಟು ರಿಯಾಯಿತಿ ಇದೆ ಎಂದು ಅವರು ಮಾಹಿತಿ ನೀಡಿದರು.
“ಬ್ಯಾಂಕುಗಳಲ್ಲಿ ಠೇವಣಿ ಇಟ್ಟ ಹಣದ ಮೇಲೆ ಬಡ್ಡಿಯನ್ನು ಗಳಿಸುವಂತೆಯೇ, ಮೂಲಸೌಕರ್ಯಕ್ಕಾಗಿ ಖರ್ಚು ಮಾಡುವ ಪ್ರತಿ ಪೈಸೆಯೂ ಹೊಸ ಆದಾಯದ ಮೂಲಗಳನ್ನು ಮತ್ತು ಹೊಸ ಉದ್ಯೋಗವನ್ನು ಸೃಷ್ಟಿಸುತ್ತದೆ,” ಎಂದು ಪ್ರಧಾನಿ ಒತ್ತಿ ಹೇಳಿದರು. ಹೊಸ ರೈಲು ಮಾರ್ಗಗಳನ್ನು ಹಾಕುವುದರಿಂದ ಕಾರ್ಮಿಕ ಅಥವಾ ಎಂಜಿನಿಯರ್ ಸೇರಿದಂತೆ ಅನೇಕ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ಮಾಹಿತಿ ನೀಡಿದರು. ಸಿಮೆಂಟ್, ಉಕ್ಕು ಮತ್ತು ಸಾರಿಗೆಯಂತಹ ಅನೇಕ ಉದ್ಯಮಗಳು ಮತ್ತು ಅಂಗಡಿಗಳಲ್ಲಿ ಹೊಸ ಉದ್ಯೋಗಗಳ ಸಾಧ್ಯತೆಗಳು ಸೃಷ್ಟಿಯಾಗಿವೆ ಎಂದು ಅವರು ಹೇಳಿದರು. “ಇಂದು ಲಕ್ಷಾಂತರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿರುವುದು ಸಾವಿರಾರು ಉದ್ಯೋಗಗಳ ʻಗ್ಯಾರಂಟಿʼಯಾಗಿದೆ,” ಎಂದು ಪ್ರಧಾನಿ ಮೋದಿ ಉದ್ಗರಿಸಿದರು. ನಿಲ್ದಾಣಗಳಲ್ಲಿ ಸ್ಥಾಪಿಸಲಾದ ಸಾವಿರಾರು ಮಳಿಗೆಗಳ ಮೂಲಕ ಸಣ್ಣ ರೈತರು, ಕುಶಲಕರ್ಮಿಗಳು ಮತ್ತು ವಿಶ್ವಕರ್ಮ ಸ್ನೇಹಿತರ ಉತ್ಪನ್ನಗಳನ್ನು ರೈಲ್ವೆ ಉತ್ತೇಜಿಸುತ್ತಿದೆ ಎಂದ ಅವರು ‘ಒನ್ ನಿಲ್ದಾಣ ಒಂದು ಉತ್ಪನ್ನ’ ಉಪಕ್ರಮದ ಬಗ್ಗೆಯೂ ಮಾತನಾಡಿದರು.
“ಭಾರತೀಯ ರೈಲ್ವೆಯು ಕೇವಲ ಪ್ರಯಾಣಿಕರ ಸೌಲಭ್ಯವಲ್ಲ, ಬದಲಿಗೆ ಭಾರತದ ಕೃಷಿ ಮತ್ತು ಕೈಗಾರಿಕಾ ಪ್ರಗತಿಯ ಅತಿದೊಡ್ಡ ವಾಹಕವಾಗಿದೆ,” ಎಂದು ಪ್ರಧಾನಿ ಹೇಳಿದರು. ವೇಗದ ರೈಲು ವ್ಯವಸ್ಥೆಯು ಸರಕು-ಸಾಗಣೆಯಲ್ಲಿ ಹೆಚ್ಚಿನ ಸಮಯವನ್ನು ಉಳಿಸುತ್ತದೆ ಮತ್ತು ಉದ್ಯಮದ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು. ಆದ್ದರಿಂದ, ʻಮೇಕ್ ಇನ್ ಇಂಡಿಯಾʼ ಮತ್ತು ʻಆತ್ಮನಿರ್ಭರ ಭಾರತʼಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದರು. ಭಾರತದ ಆಧುನಿಕ ಮೂಲಸೌಕರ್ಯವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ವಿಶ್ವದಾದ್ಯಂತ ಹೂಡಿಕೆಗೆ ಅತ್ಯಂತ ಆಕರ್ಷಕ ಸ್ಥಳ ಎಂದು ರಾಷ್ಟ್ರವನ್ನು ಶ್ಲಾಘಿಸಿದರು. ಮುಂದಿನ 5 ವರ್ಷಗಳ ಮುನ್ನೋಟವನ್ನು ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಿಯವರು, ಈ ಸಾವಿರಾರು ನಿಲ್ದಾಣಗಳನ್ನು ಆಧುನೀಕರಿಸಿದಾಗ ಭಾರತೀಯ ರೈಲ್ವೆಯ ಸಾಮರ್ಥ್ಯ ಹೆಚ್ಚಾಗುತ್ತದೆ, ಇದು ಭಾರಿ ಹೂಡಿಕೆಯ ಕ್ರಾಂತಿಯನ್ನು ತರಲಿದೆ ಎಂದು ಹೇಳಿದರು.
ಹಿನ್ನೆಲೆ
ರೈಲ್ವೆ ನಿಲ್ದಾಣಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ಮಹತ್ವವನ್ನು ಪ್ರಧಾನಿ ಆಗಾಗ್ಗೆ ಒತ್ತಿ ಹೇಳಿದ್ದಾರೆ. ಈ ಪ್ರಯತ್ನದ ಪ್ರಮುಖ ಹೆಜ್ಜೆಯಾಗಿ, ʻಅಮೃತ ಭಾರತ ನಿಲ್ದಾಣʼ ಯೋಜನೆಯಡಿ 553 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು. 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಿಸಿರುವ ಈ ನಿಲ್ದಾಣಗಳನ್ನು 19,000 ಕೋಟಿ ರೂ.ಗಳ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುವುದು. ಈ ನಿಲ್ದಾಣಗಳು ನಗರದ ಎರಡೂ ಬದಿಗಳನ್ನು ಸಂಯೋಜಿಸುವ ‘ನಗರ ಕೇಂದ್ರಗಳಾಗಿ’ ಕಾರ್ಯನಿರ್ವಹಿಸುತ್ತವೆ. ʻರೂಫ್ ಪ್ಲಾಜಾʼ, ಸುಂದರವಾದ ಭೂದೃಶ್ಯ, ಅಂತರ ಮಾದರಿ ಸಂಪರ್ಕ, ಸುಧಾರಿತ ಆಧುನಿಕ ಮುಂಭಾಗ, ಮಕ್ಕಳ ಆಟದ ಪ್ರದೇಶ, ಕಿಯೋಸ್ಕ್‌ಗಳು, ಫುಡ್ ಕೋರ್ಟ್‌ಗಳು ಮುಂತಾದ ಆಧುನಿಕ ಪ್ರಯಾಣಿಕರ ಸೌಲಭ್ಯಗಳನ್ನು ಇವು ಹೊಂದಿರುತ್ತವೆ. ಈ ನಿಲ್ದಾಣಗಳನ್ನು ಪರಿಸರ ಸ್ನೇಹಿ ಮತ್ತು ದಿವ್ಯಾಂಗ ಸ್ನೇಹಿಯಾಗಿ ಪುನರಾಭಿವೃದ್ಧಿ ಮಾಡಲಾಗುವುದು. ಈ ನಿಲ್ದಾಣದ ಕಟ್ಟಡಗಳ ವಿನ್ಯಾಸವು ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದಂಥದ್ದಾಗಿರಲಿದೆ.
ಇದಲ್ಲದೆ, ಸುಮಾರು 385 ಕೋಟಿ ರೂ.ಗಳ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾದ ಉತ್ತರ ಪ್ರದೇಶದ ʻಗೋಮತಿ ನಗರ ನಿಲ್ದಾಣʼವನ್ನು ಪ್ರಧಾನಿ ಉದ್ಘಾಟಿಸಿದರು. ಭವಿಷ್ಯದಲ್ಲಿ ಹೆಚ್ಚುವ ಪ್ರಯಾಣಿಕರ ಸಂಖ್ಯೆಯನ್ನು ನಿಭಾಯಿಸಲು, ಈ ನಿಲ್ದಾಣದಲ್ಲಿ ಆಗಮನ ಮತ್ತು ನಿರ್ಗಮನ ಸೌಲಭ್ಯಗಳನ್ನು ಪ್ರತ್ಯೇಕಿಸಲಾಗಿದೆ. ಇದು ನಗರದ ಎರಡೂ ಬದಿಗಳನ್ನು ಸಂಯೋಜಿಸುತ್ತದೆ. ಈ ಕೇಂದ್ರೀಯ ಹವಾನಿಯಂತ್ರಿತ ನಿಲ್ದಾಣವು ʻಏರ್ ಕಾನ್ಕೋರ್ಸ್ʼ, ದಟ್ಟಣೆ ಮುಕ್ತ ಪರಿಚಲನೆ, ಫುಡ್ ಕೋರ್ಟ್‌ಗಳು ಹಾಗೂ ಮೇಲಿನ ಮತ್ತು ಕೆಳಗಿನ ನೆಲಮಾಳಿಗೆಯಲ್ಲಿ ಸಾಕಷ್ಟು ಪಾರ್ಕಿಂಗ್ ಸ್ಥಳದಂತಹ ಆಧುನಿಕ ಪ್ರಯಾಣಿಕರ ಸೌಲಭ್ಯಗಳನ್ನು ಹೊಂದಿದೆ.
ಪ್ರಧಾನಮಂತ್ರಿಯವರು 1500 ರಸ್ತೆ ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ನೆರವೇರಿಸಿದರು. 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಿಸಿರುವ ಈ ರಸ್ತೆ ಮೇಲ್ಸೇತುವೆಗಳು ಮತ್ತು ಕೆಳಸೇತುವೆ ಯೋಜನೆಗಳ ಒಟ್ಟು ವೆಚ್ಚ ಸುಮಾರು 21,520 ಕೋಟಿ ರೂಪಾಯಿಗಳು. ಈ ಯೋಜನೆಗಳು ದಟ್ಟಣೆಯನ್ನು ಕಡಿಮೆ ಮಾಡುತ್ತವೆ, ಸುರಕ್ಷತೆ ಮತ್ತು ಸಂಪರ್ಕವನ್ನು ಹೆಚ್ಚಿಸುತ್ತವೆ, ಜೊತೆಗೆ ಸಾಮರ್ಥ್ಯ ಮತ್ತು ರೈಲು ಪ್ರಯಾಣದ ದಕ್ಷತೆಯನ್ನು ಸುಧಾರಿಸುತ್ತವೆ.