ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಭಾರತ್ ಮಂಟಪದಲ್ಲಿ ಭಾರತ್ ಟೆಕ್ಸ್‌ 2025 ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರು ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಮಳಿಗೆಗಳನ್ನು ವೀಕ್ಷಿಸಿದರು. ನಂತರ ನೆರದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಎಲ್ಲರನ್ನೂ ಭಾರತ್‌ ಟೆಕ್ಸ್‌ 2025ಗೆ ಸ್ವಾಗತಿಸಿದರು ಮತ್ತು ಭಾರತ್‌ ಮಂಟಪ್‌ 2ನೇ ಆವೃತ್ತಿಯ ಭಾರತ್‌ ಟೆಕ್ಸ್‌ ಗೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ಈ ಕಾರ್ಯಕ್ರಮವು ನಮ್ಮ ಪರಂಪರೆಯ ಬಗ್ಗೆ ಮತ್ತು ಭಾರತಕ್ಕೆ ಹೆಮ್ಮೆಯ ವಿಷಯವಾಗಿದ್ದ ವಿಕಸಿತ ಭಾರತದ ಭವಿಷ್ಯದ ಬಗ್ಗೆ ಒಂದು ಒಳನೋಟವನ್ನು ನೀಡಿತು ಎಂದು ಅವರು ಹೇಳಿದರು. “ಭಾರತ್ ಟೆಕ್ಸ್ ಈಗ ಬೃಹತ್ ಜಾಗತಿಕ ಜವಳಿ ಕಾರ್ಯಕ್ರಮವಾಗುತ್ತಿದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

“ಭಾರತ್ ಟೆಕ್ಸ್ ನಲ್ಲಿ ಇಂದು 120ಕ್ಕೂ ಅಧಿಕ ರಾಷ್ಟ್ರಗಳು ಭಾಗವಹಿಸಿವೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಅಲ್ಲದೆ ಅವರು, ಪ್ರತಿಯೊಬ್ಬ ಪ್ರದರ್ಶಕರು 120ಕ್ಕೂ ಅಧಿಕ ರಾಷ್ಟ್ರಗಳಿಗೆ ತೆರೆದುಕೊಳ್ಳಬಹುದಾಗಿದೆ ಮತ್ತು ತಮ್ಮ ವ್ಯಾಪಾರವನ್ನು ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟಕ್ಕೆ ವಿಸ್ತರಿಸಲು ಅವಕಾಶವಾಗುತ್ತದೆ. ಹೊಸ ಮಾರುಕಟ್ಟೆಗಳನ್ನು ಶೋಧಿಸುವ ಉದ್ಯಮಿಗಳು ಹಲವು ಜಾಗತಿಕ ಮಾರುಕಟ್ಟೆಗಳ ಸಾಂಸ್ಕೃತಿಕ ಅಗತ್ಯತೆಗಳಿಗೆ ಉತ್ತಮ ರೀತಿಯಲ್ಲಿ ತೆರೆದುಕೊಳ್ಳಬಹುದಾಗಿದೆ ಎಂದರು. ತಾವು ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಹಲವು ಮಳಿಗೆಗಳಿಗೆ ಭೇಟಿ ನೀಡಿ, ಸಂವಾದ ನಡೆಸಿದೆ ಎಂದು ಹೇಳಿದರು. ಕಳೆದ ವರ್ಷ ಭಾರತ್ ಟೆಕ್ಸ್ ನಲ್ಲಿ ಭಾಗವಹಿಸಿದ್ದ ಅನುಭವವನ್ನು ಹಲವರು ಹಂಚಿಕೊಂಡಿದ್ದಾರೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. ಹೊಸ ಖರೀದಿದಾರರನ್ನು ದೊಡ್ಡ ಪ್ರಮಾಣದಲ್ಲಿ ಗಳಿಸುವುದು ಮತ್ತು ವ್ಯಾಪಾರವನ್ನು ವಿಸ್ತರಿಸುವುದು, ಹೂಡಿಕೆಗೆ ಉತ್ತೇಜನ, ರಫ್ತು ಮತ್ತು ಒಟ್ಟಾರೆ ಜವಳಿ ವಲಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬ್ಯಾಂಕಿಂಗ್ ವಲಯ, ಜವಳಿ ವಲಯದ ಉದ್ಯಮಿಗಳ ಅಗತ್ಯತೆಯನ್ನು ಪೂರೈಸಬೇಕಿದೆ ಎಂದು ಕರೆ ನೀಡಿದ ಅವರು, ಆ ಮೂಲಕ ಉದ್ಯಮಿಗಳು ತಮ್ಮ ಉದ್ಯಮವನ್ನು ವಿಸ್ತರಿಸಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವು ನೀಡಬೇಕು ಎಂದರು.

“ಭಾರತ್ ಟೆಕ್ಸ್, ನಮ್ಮ ಸಾಂಪ್ರದಾಯಿಕ ಗಾರ್ಮೆಂಟ್ಸ್ ಮೂಲಕ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಬಿಂಬಿಸುತ್ತದೆ” ಎಂದು ಪ್ರಧಾನಮಂತ್ರಿ ಹೇಳಿದರು. ಪೂರ್ವದಿಂದ ಪಶ್ಚಿಮ, ಉತ್ತರದಿಂದ ದಕ್ಷಿಣದ ವರೆಗೆ ಭಾರತ ತನ್ನದೇ ಆದ ವಿಸ್ತೃತ ಶ್ರೇಣಿಯ ಸಾಂಪ್ರದಾಯಿಕ ಉಡುಗೆಗಳನ್ನು ಹೊಂದಿದೆ ಎಂದರು. ಅಲ್ಲದೆ ಅವರು, ರಾಜಸ್ತಾನ ಮತ್ತು ಗುಜರಾತ್ ನ ಲಕ್ನೋವಿ ಚಿಕಂಕರಿ, ಬಂದನಿ, ಗುಜರಾತ್‌ನ ಪಟೋಲಾ, ವಾರಣಾಸಿಯ ಬನಾರಸಿ ರೇಷ್ಮೆ, ದಕ್ಷಿಣದ ಕಾಂಜೀವರಂ ರೇಷ್ಮೆ, ಜಮ್ಮು ಮತ್ತು ಕಾಶ್ಮೀರದ ಪಶ್ಮಿನಾ ಸೇರಿ ವಿವಿಧ ಬಗೆಯ ಉಡುಪುಗಳಿವೆ ಎಂದು ಪ್ರಮುಖವಾಗಿ ಉಲ್ಲೇಖಿಸಿದರು. ನಮ್ಮ ವೈವಿಧ್ಯತೆಯನ್ನು ಹಾಗೂ ಜವಳಿ ಉದ್ಯಮದ ವಿನೂತನವನ್ನು ಉತ್ತೇಜಿಸಲು ಹಾಗೂ ಅವುಗಳನ್ನು ಬೆಳೆಸಲು ಇದು ಸೂಕ್ತ ಸಮಯ ಎಂದು ಅವರು ಪ್ರಸ್ತಾಪಿಸಿದರು.

ಕಳೆದ ವರ್ಷ ಜವಳಿ ಉದ್ಯಮದ 5 ಪ್ರಮುಖ ಅಂಶಗಳಾದ, ಕೃಷಿ(ಫಾರ್ಮ್), ನಾರು(ಫೈಬರ್ ), ಬಟ್ಟೆ(ಫ್ಯಾಬ್ರಿಕ್), ಫ್ಯಾಷನ್ ಮತ್ತು ವಿದೇಶಿ, ಈ ದೃಷ್ಟಿಕೋನವು ಭಾರತಕ್ಕೆ ಒಂದು ಧ್ಯೇಯವಾಗುತ್ತಿದೆ, ರೈತರು, ನೇಕಾರರು, ವಿನ್ಯಾಸಕರು ಮತ್ತು ವ್ಯಾಪಾರಿಗಳಿಗೆ ಹೊಸ ಬೆಳವಣಿಗೆಯ ಮಾರ್ಗಗಳನ್ನು ತೆರೆಯುತ್ತಿದೆ ಎಂದು ಶ್ರೀ ಮೋದಿ ಹೇಳಿದರು.

ಕಳೆದ ಒಂದು ದಶಕದಲ್ಲಿ ಕೈಗೊಂಡ ನಿರಂತರ ಪ್ರಯತ್ನಗಳು ಮತ್ತು ನೀತಿಗಳ ಪರಿಣಾಮ ಜವಳಿ ವಲಯ ಯಶಸ್ಸು ಗಳಿಸಿದೆ ಎಂದು ಬಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿಗಳು, ಕಳೆದ ಒಂದು ದಶಕದಲ್ಲಿ ಜವಳಿ ವಲಯದಲ್ಲಿ ವಿದೇಶಿ ಬಂಡವಾಳ ಹೂಡಿಕೆ ದುಪ್ಪಟ್ಟಾಗಿದೆ ಎಂದರು. “ಜವಳಿ ಉದ್ಯಮ ದೇಶದಲ್ಲಿ ಅತಿದೊಡ್ಡ ಉದ್ಯೋಗ ಸೃಷ್ಟಿಸುವ ವಲಯವಾಗಿದೆ, ಅದು ಭಾರತದ ಉತ್ಪಾದನಾ ವಲಯಕ್ಕೆ ಶೇ.11ರಷ್ಟು ಕೊಡುಗೆ ನೀಡುತ್ತಿದೆ” ಎಂದು ಹೇಳಿದರು. ಅಲ್ಲದೆ ಈ ಬಜೆಟ್ ನಲ್ಲಿ ಉತ್ಪಾದನಾ ಮಿಷನ್ ಘೋಷಣೆ ಮಾಡಲಾಗಿದೆ ಎಂದು ಪ್ರಸ್ತಾಪಿಸಿದರು. ಈ ವಲಯದ ಹೂಡಿಕೆ ಮತ್ತು ಪ್ರಗತಿಯಿಂದ ಜವಳಿ ವಲಯದ ಕೋಟ್ಯಾಂತರ ಕಾರ್ಮಿಕರಿಗೆ ಅನುಕೂಲವಾಗುತ್ತಿದೆ ಎಂದು ಅವರು ಹೇಳಿದರು.

ಕಳೆದ ವರ್ಷ ಭಾರತ್ ಟೆಕ್ಸ್ ಕಾರ್ಯಕ್ರಮದಲ್ಲಿ ಜವಳಿ ಸ್ಟಾರ್ಟ್ ಅಪ್ ಗ್ರಾಂಡ್ ಚಾಲೆಂಜ್ ಅನ್ನು ಆರಂಭಿಸಲಾಗಿತ್ತು ಎಂದು ಉಲ್ಲೇಖಿಸಿದ ಅವರು, ಜವಳಿ ವಲಯಕ್ಕೆ ಯುವಜನತೆಯಿಂದ ನವೀನ ಸುಸ್ಥಿರ ಪರಿಹಾರಗಳನ್ನು ಆಹ್ವಾನಿಸಲಾಗಿತ್ತು ಎಂದು ಹೇಳಿದರು. ದೇಶಾದ್ಯಂತ ಯುವಜನತೆ ಈ ಚಾಲೆಂಜ್ ನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಮತ್ತು ಅದರಲ್ಲಿ ವಿಜೇತರಾದವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳಿದರು.

ಜಗತ್ತಿನ ಫ್ಯಾಷನ್ ರಾಜಧಾನಿ ಎಂದೇ ಹೆಸರಾದ ಪ್ಯಾರಿಸ್ ನ ತಮ್ಮ ಇತ್ತೀಚಿಗೆ ಪ್ರವಾಸವನ್ನು ನೆನಪಿಸಿಕೊಂಡ ಅವರು, ಎರಡೂ ದೇಶಗಳ ನಡುವೆ ಹಲವು ವಿಷಯಗಳಲ್ಲಿ ಮಹತ್ವದ ಪಾಲುದಾರಿಕೆಗಳಾದವು ಎಂದರು. ಹವಾಮಾನ ವೈಪರೀತ್ಯ ಮತ್ತು ಪರಿಸರ, ಸುಸ್ಥಿರ ಜೀವನಶೈಲಿ ಪ್ರಾಮುಖ್ಯತೆ, ಫ್ಯಾಷನ್ ಜಗತ್ತಿನ ಮೇಲೆ ಅದು ಬೀರುತ್ತಿರುವ ಪರಿಣಾಮಗಳು ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು ಎಂದು ಅವರು ಉಲ್ಲೇಖಿಸಿದರು. “ಜಗತ್ತು ಪರಿಸರ ಮತ್ತು ಸಬಲೀಕರಣ ಫ್ಯಾಷನ್ ಗಾಗಿ ದೂರದೃಷ್ಟಿಯನ್ನು ಅಳವಡಿಸಿಕೊಳ್ಳುತ್ತಿದೆ ಮತ್ತು ಆ ನಿಟ್ಟಿನಲ್ಲಿ ಭಾರತದಲ್ಲಿ ಮುನ್ನಡೆ ಕಾಯ್ದುಕೊಂಡಿದೆ” ಎಂದು ಅವರು ಹೇಳಿದರು. ಸುಸ್ಥಿರತೆ ಎಂಬುದು ಭಾರತೀಯ ಜವಳಿ ಪರಂಪರೆಯ ಅವಿಭಾಜ್ಯ ಅಂಗವಾಗಿದೆ ಎಂದ ಅವರು, ಖಾದಿ, ಬುಡಕಟ್ಟು ಜವಳಿ ಮತ್ತು ನೈಸರ್ಗಿಕ ಬಣ್ಣಗಳ ಬಳಕೆಯ ಉದಾಹರಣೆಯನ್ನು ನೀಡಿದರು. ಭಾರತದ ಸಾಂಪ್ರದಾಯಿಕ ಸುಸ್ಥಿರ ತಂತ್ರಜ್ಞಾನಗಳನ್ನು ಇದೀಗ ಕಟಿಂಗ್ ಎಡ್ಜ್‌ ತಂತ್ರಜ್ಞಾನ ಮತ್ತು ಕರಕುಶಲಕರ್ಮಿಗಳು, ನೇಕಾರರು ಹಾಗೂ ಉದ್ಯಮದ ಜತೆ ತೊಡಗಿರುವ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಶತಮಾನಗಳ ಹಿಂದೆ ಭಾರತ ಸಮೃದ್ಧಿಯ ಉತ್ತುಂಗದಲ್ಲಿದ್ದಾಗ ಜವಳಿ ಉದ್ಯಮ, ಆ ಸಮೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿತ್ತು ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಭಾರತ ವಿಕಸಿತ ಭಾರತವಾಗುವ ಗುರಿಯತ್ತ ಪ್ರಗತಿಪರವಾಗಿ ಮುನ್ನಡೆದಿದ್ದು, ಜವಳಿ ವಲಯ ಮತ್ತೊಮ್ಮೆ ಅತ್ಯಂತ ಪ್ರಮುಖ ಪಾತ್ರವಹಿಸಲಿವೆ ಎಂದರು. ಭಾರತ್ ಟೆಕ್ಸ್ ನಂತಹ ಕಾರ್ಯಕ್ರಮಗಳು ಈ ವಲಯದಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲವರ್ಧನೆಗೊಳಿಸಲಿವೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. ಯಶಸ್ಸಿನ ಮತ್ತಷ್ಟು ದಾಖಲೆ ಬರೆಯುವುದನ್ನು ಮುಂದುವರಿಸಬೇಕು ಮತ್ತು ಪ್ರತಿ ವರ್ಷ ಹೊಸ ಎತ್ತರಕ್ಕೆ ಏರಬೇಕು ಎನ್ನುವ ಆಶಯದೊಂದಿಗೆ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಕೇಂದ್ರ ಜವಳಿ ಸಚಿವ ಶ್ರೀ ಗಿರಿರಾಜ್ ಸಿಂಗ್ ಮತ್ತು ಜವಳಿ ಖಾತೆ ರಾಜ್ಯ ಸಚಿವ ಶ್ರೀ ಪಬಿತ್ರ ಮಾರ್ಗರಿಟಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.