ಅಮೆರಿಕ, ಇಂಗ್ಲೆಂಡ್, ಸೌದಿ, ರಷ್ಯಾಗೆ ಮಾಹಿತಿ
ನವದೆಹಲಿ: ರಾತ್ರೋ ರಾತ್ರಿ ಭಾರತ ನಡೆಸಿದ ʻಆಪರೇಷನ್ ಸಿಂಧೂರʼ ಪ್ರತೀಕಾರದ ದಾಳಿಯಲ್ಲಿ ನಿಷೇಧಿತ ಮೂರು ಉಗ್ರ ಸಂಘಟನೆಗಳಾದ ಜೈಶ್ ಎ ಮೊಹಮ್ಮದ್, ಲಷ್ಕರ್ ಎ ತೈಬಾ (LET) ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಪ್ರಧಾನ ಕಚೇರಿಗಳು ಧ್ವಂಸವಾಗಿದೆ.
ಪಾಕಿಸ್ತಾನ ಮತ್ತು ಪಾಕ್ ಅಕ್ರಮಿತ ಕಾಶ್ಮೀರದಲ್ಲಿರುವ 9 ಅಡಗುತಾಣಗಳ ಮೇಲೆ ಭಾರತೀಯ ವಾಯು ಸೇನೆ (IAF) ದಾಳಿ ನಡೆಸಿದೆ. ಭಾರತ ಧ್ವಂಸ ಮಾಡಿರುವ ಈ ಉಗ್ರರ (Terrorist) ನೆಲೆಗಳು ಮೋಸ್ಟ್ ಡೇಂಜರಸ್ ತಾಣಗಳು ಎಂದೇ ಗುರುತಿಸಿಕೊಂಡಿದ್ದು, ಇಡೀ ವಿಶ್ವಕ್ಕೆ ಕಂಟಕವಾಗಿದ್ದವು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇಲ್ಲಿ ಅಡಗಿಸಿಡಲಾಗಿತ್ತು. ಜೊತೆಗೆ ವಿಶ್ವಾದ್ಯಂತ ವಿವಿಧೆಡೆಗೆ ಕಳುಹಿಸಲು ಇಲ್ಲಿ ತರಬೇತಿ ನೀಡಲಾಗುತ್ತಿತ್ತು ಅನ್ನೋ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಅದಕ್ಕಾಗಿ ಭಾರತೀಯ ಸೇನೆಯು ನಾಗರಿಕರು ಮತ್ತು ಸೇನೆಯನ್ನ ಗುರಿಯಾಗಿಸದೇ ಕೇವಲ ಉಗ್ರರ ನೆಲೆಗಳನ್ನ ಗುರಿಯಾಗಿಸಿ ದಾಳಿ ನಡೆಸಿದೆ.
ಕಾರ್ಯಾಚರಣೆಯಲ್ಲಿ ನಿಷೇಧಿತ ಜೈಶ್ -ಎ-ಮೊಹಮ್ಮದ್ ಭಯೋತ್ಪಾದಕ ಗುಂಪುಗಳ ನೆಲೆಯಿರುವ ಬಹವಾಲ್‌ಪುರದಲ್ಲಿ ಮರ್ಕಜ್ ಸುಭಾನ್ ಅಲ್ಲಾ ಮಸೀದಿ, ತೆಹ್ರಾ ಕಲಾನ್‌ನಲ್ಲಿನ ಸರ್ಜಾಲ್, ಕೋಟಿಯ ಮರ್ಕಜ್ ಅಬ್ಬಾಸ್ ಮತ್ತು ಮುಜಫರಾಬಾದ್‌ನ ಸೈಯನ್ನಾ ಬಿಲಾಲ್ ಕ್ಯಾಂಪ್‌ಗಳ ಮೇಲೆ ಭಾರತ ದಾಳಿ ನಡೆಸಿದೆ. ಲಷ್ಕರ್ ಎ ತೈಬಾ ಉಗ್ರ ಸಂಘಟನೆಯ ಶಿಬಿರಗಳಿರುವ ಮುರ್ಡಿಕೆಯ ಮರ್ಕಝ್ ತೈಬಾ, ಬರ್ನಾಲಾದಲ್ಲಿ ಮರ್ಕಝ್ ಅತ್ತೆ ಹದಿತ್ ಮತ್ತು ಮುಜಫರಾಬಾದ್‌ನ ಶ್ವವಾಯಿ ನಲ್ಲಾ ಮೇಲೆ ದಾಳಿ ನಡೆದಿದೆ.
ಮಕಾಜ್ ರಹೀಲ್ ಶಾಹಿದ್ ಮತ್ತು ಸಿಯಾಲ್‌ಕೋಟ್‌ನ ಮೆಹಮೂನಾ ಜೋಯಾ ಪ್ರದೇಶಗಳಲ್ಲಿ ನಿಷೇಧಿತ ಹಿಜ್ಜುಲ್ ಮುಜಾಹಿದ್ದೀನ್‌ನ ಶಿಬಿರಗಳು ಮತ್ತು ತರಬೇತಿ ಕೇಂದ್ರಗಳಿದ್ದು, ಅವುಗಳನ್ನು ಧ್ವಂಸಗೊಳಿಸಲಾಗಿದೆ.
ಭಾರತದ ಏರ್‌ಸ್ಟ್ರೈಕ್ ಕುರಿತು ಭಾರತೀಯ ವಿದೇಶಾಂಗ ಸಚಿವಾಲಯ ಅಮೆರಿಕ, ಇಂಗ್ಲೆಂಡ್, ಸೌದಿ ಅರೇಬಿಯಾ, ರಷ್ಯಾ ಸೇರಿದಂತೆ ಹಲವು ದೇಶಗಳಿಗೆ ಮಾಹಿತಿ ನೀಡಿದೆ. ಭಾರತದ ಈ ದಾಳಿಯನ್ನು ಇಸ್ರೇಲ್ ಸೇರಿದಂತೆ ಹಲವು ದೇಶಗಳು ಶ್ಲಾಘಿಸಿವೆ.
ತಡರಾತ್ರಿ 1:44 ಗಂಟೆ ವೇಳೆಗೆ ಪಾಕ್ ಉಗ್ರರ ಅಡಗುತಾಣಗಳ ಮೇಲೆ ರಫೇಲ್ ಇನ್ನಿತರ ಫೈಟರ್‌ಜೆಟ್‌ಗಳಿಂದ ದಾಳಿ ನಡೆಸಿದ ಭಾರತೀಯ ಸೇನೆ ರಾತ್ರಿ 2:07 ವೇಳೆಗೆ ಕಾರ್ಯಾಚರಣೆ ಮುಗಿಸಿತ್ತು. ದಾಳಿ ನಡೆಸಿದ ಬಳಿಕ ಭಾರತೀಯ ಸೇನೆಯ ಜೆಟ್‌ಗಳು ಸೇಫ್ ಆಗಿ ಮರಳಿವೆ. ಇನ್ನೂ ಈ ದಾಳಿಯಲ್ಲಿ 80ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ, ಜೊತೆಗೆ ಲಷ್ಕರ್ ಉಗ್ರರಿಗೆ ತರಬೇತಿ ನೀಡಿದ್ದ ಸುಬಾನಲ್ಲಾಹ್ ಮಸೀದಿ ಸೇರಿದಂತೆ ಪ್ರಮುಖ ತಾಣಗಳು ಧ್ವಂಸವಾಗಿದೆ.