ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ‘ಸ್ನೇಕ್ ಚಾರ್ಮರ್’ (ಹಾವಾಡಿಗ) ರೂಪದಲ್ಲಿ ಬಿಂಬಿಸಿ ನಾರ್ವೆಯ (Norway) ಪ್ರಮುಖ ಪತ್ರಿಕೆಯೊಂದು ಪ್ರಕಟಿಸಿರುವ ಕಾರ್ಟೂನ್ ಈಗ ಜಾಗತಿಕ ಮಟ್ಟದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ವೈರಲ್ ಆಗುತ್ತಿರುದ್ದಂತೆ, ವಿದೇಶಿ ಮಾಧ್ಯಮದ ವಿರುದ್ಧ ಭಾರತೀಯರು (Indians) ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ : ಮೇ 20 ವಿಶ್ವ ಜೇನುನೊಣ ದಿನ
ವಿವಾದಾತ್ಮಕ ಕಾರ್ಟೂನ್‌ನಲ್ಲೇನಿದೆ?
ನಾರ್ವೆಯ ಅತ್ಯಂತ ಜನಪ್ರಿಯ ದಿನಪತ್ರಿಕೆಯಾದ ‘ಆಫ್ಟೆನ್‌ಪೋಸ್ಟನ್’ (Aftenposten) ಈ ಕಾರ್ಟೂನ್ ಅನ್ನು ಪ್ರಕಟಿಸಿದೆ. ಅದರಲ್ಲಿ ಪ್ರಧಾನಿ ಮೋದಿ ಅವರು ಹಾವಾಡಿಗನಂತೆ ಕುಳಿತು ‘ಪುಂಗಿ’ ಊದುತ್ತಿರುವಂತೆ ಚಿತ್ರಿಸಲಾಗಿದೆ. ಪುಂಗಿಯ ನಾದಕ್ಕೆ ತಕ್ಕಂತೆ ಬುಟ್ಟಿಯಿಂದ ಮೇಲೇಳುವ ಹಾವಿನ ಜಾಗದಲ್ಲಿ ‘ಪೆಟ್ರೋಲ್ ಬಂಕ್‌ನ ನೋಜಲ್’ ಅನ್ನು ತೋರಿಸಲಾಗಿದೆ.
ಬ್ರಿಟಿಷರ ಕಾಲದಲ್ಲಿ ಭಾರತವನ್ನು ‘ಹಾವಾಡಿಗರ ಮತ್ತು ಮಾಟಮಂತ್ರಗಳ ದೇಶ’ ಎಂದು ಹೀಗಳೆಯಲಾಗುತ್ತಿತ್ತು. ಜಾಗತಿಕವಾಗಿ ಭಾರತ ಇಷ್ಟೊಂದು ಬೆಳೆದಿದ್ದರೂ, ವಿದೇಶಿ ಮಾಧ್ಯಮಗಳು ಇನ್ನೂ ಅದೇ ಹಳೇ ಮನಸ್ಥಿತಿಯಲ್ಲಿ ಭಾರತವನ್ನು ನೋಡುತ್ತಿವೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಭಾರತವು ಆರ್ಥಿಕ ಮತ್ತು ತಂತ್ರಜ್ಞಾನ ರಂಗದಲ್ಲಿ ಮುನ್ನುಗ್ಗುತ್ತಿರುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕೆಲವು ಪಾಶ್ಚಿಮಾತ್ಯ ಮಾಧ್ಯಮಗಳು ಉದ್ದೇಶಪೂರ್ವಕವಾಗಿಯೇ ಇಂತಹ ನಿರೂಪಣೆಗಳನ್ನು ಸೃಷ್ಟಿಸುತ್ತಿವೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಸ್ಪೇನ್‌ನ ಪ್ರಮುಖ ಪತ್ರಿಕೆಯೊಂದು 2022 ರಲ್ಲಿ ಭಾರತದ ಆರ್ಥಿಕ ಬೆಳವಣಿಗೆಯನ್ನು ಇದೇ ರೀತಿಯ ‘ಹಾವಾಡಿಗ’ನ ಸಂಕೇತ ಬಳಸಿ ಚಿತ್ರಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು.
ಪ್ರಸ್ತುತ ನಾರ್ವೆ ಪತ್ರಿಕೆಯ ಈ ನಡೆಗೆ ಜಾಗತಿಕ ಮಟ್ಟದಲ್ಲಿ ಭಾರತೀಯ ಮೂಲದ ರಾಜತಾಂತ್ರಿಕರು ಹಾಗೂ ನೆಟ್ಟಿಗರು ‘ಬಾಯ್ಕಾಟ್ ನಾರ್ವೆ ಮೀಡಿಯಾ’ ಹ್ಯಾಶ್‌ಟ್ಯಾಗ್‌ಗಳ ಮೂಲಕ ತಮ್ಮ ಪ್ರತಿರೋಧ ದಾಖಲಿಸುತ್ತಿದ್ದಾರೆ.
