ಬಂಟ್ವಾಳ : ತಾನು ಕಲಿತ ಶಾಲೆಗಳಿಂದ ಪಡೆದ ಪ್ರಯೋಜನಗಳನ್ನು ಸ್ಮರಣೆಯಲ್ಲಿರಿಸಿ ಅವುಗಳ ಪ್ರಗತಿಯಲ್ಲಿ ಭಾಗಿದಾರಿಗಳಾಗಬೇಕಾದದು ಹಿರಿಯ ವಿದ್ಯಾರ್ಥಿಗಳ ಭಧ್ದತೆಯಾಗಿದೆ. ಕಲಿತ ಶಾಲೆಗಳನ್ನು ಬೆಳೆಸುವುದೇ ಗುರುಋಣ ಸಂದಾಯ ಮಾಡಲು ಪರ್ಯಾಯ ದಾರಿಯಾಗಿದೆ ಎಂದು ಮಕ್ಕಳ ಕಲಾಲೋಕದ ಬಂಟ್ವಾಳ ತಾಲೂಕಿನ ಘಟಕ ಅಧ್ಯಕ್ಷರಾದ ರಮೇಶ ಎಂ. ಬಾಯಾರು ಹೇಳಿದರು.

ಅವರು ಶುಕ್ರವಾರ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ “ಪ್ರತಿಭಾ ಪುರಸ್ಕಾರ 2024-25 ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಗ್ರಾಮಾಂತರ ಶಾಲೆಗಳಿಗೆ ಮೆರುಗು ಬರಲು ಸಾರ್ವಜನಿಕರು ತಮ್ಮನ್ನು ನಿರಂತರವಾಗಿ ಶಾಲೆಗಳ ಜೊತೆ ಜೋಡಿಸುತ್ತಾ ನೆರವು ನೀಡಬೇಕು ಮಕ್ಕಳ ಕಲಿಕೆಗೆ ಪೂರಕ ಸೌಲಭ್ಯಗಳು ಸಹಪಠ್ಯ ಚಟುವಟಿಕೆಗಳಿಗೆ ಬೆಂಬಲ ಸಮಾಜದ ಹೊಣೆಗಾರಿಕೆ ಎಂದು ಅವರು ಹೇಳಿದರು.

ಕೆದಿಲ ಹಾಗೂ ಕಡೇಶಿವಾಲಯ ಕ್ಲಸ್ಟರ್ ಸಿ.ಆರ್.ಪಿ. ಸುಧಾಕರ್ ಭಟ್ ಮಾತನಾಡಿ ಶಾಲೆ ಎಂಬುದು ಸರ್ವ ಧರ್ಮಿಯರ ದೇವಾಲಯದಂತೆ, ದೇವರಿಗೆ ಶಕ್ತಿ ಬರಲು ಹೇಗೆ ಅವರವರ ಧರ್ಮಿಯ ಪೂಜೆ ಪುನಸ್ಕಾರಗಳು ನಡೆಯುವಂತೆ ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಶಕ್ತಿ ಹೆಚ್ಚಲು ನಿರಂತರ ನವನವೀನ ಕಾರ್ಯಕ್ರಮಗಳು ಶಾಲೆಗಳಲ್ಲಿ ನಡೆಯುತ್ತಿರಬೇಕು ಎಂದರು.

ಆಂಗ್ಲ ಮಾಧ್ಯಮವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಾದವ ರೈ ಮಾತನಾಡಿ ಶಾಲಾ ವಾರ್ಷಿಕೋತ್ಸವಗಳು ಮಕ್ಕಳ ಪ್ರತಿಭಾ ದರ್ಪಣ ಮಾಡುವುದರೊಂದಿಗೆ ಶಾಲೆ ಮತ್ತು ಪಾಲಕರು ನಿಕಟವಾಗಲು ಕಾರಣವಾಗುತ್ತದೆ.ಕಡೇಶಿವಾಲಯ ಪ್ರೌಢಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಗಳ ಆರಂಭ ಅಗತ್ಯ ಎಂದರು.

ಕಡೇಶಿವಾಲಯ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ರಾವ್ ಕಾರ್ಯಕ್ರಮ ಉದ್ಘಾಟಿಸಿ ಸಭೆಯ ಅಧ್ಯಕ್ಷತೆ ವಹಿಸಿ ಶಾಲೆಯ ಅಭಿವೃದ್ಧಿ ದೃಷ್ಟಿಯಲ್ಲಿ ಗ್ರಾಮ ಪಂಚಾಯತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಲಿಕೆ ಹಾಗೂ ವಿವಿಧ ಆಟೊ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಬೆಳ್ತಂಗಡಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮಿಮಿಕ್ರಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಏಳನೇ ತರಗತಿ ವಿದ್ಯಾರ್ಥಿ ಕುಮಾರಿ ತನಿಷ್ಕಾ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸಿದ ಗ್ರಾಮದ ಸೈನಿಕರನ್ನು ಗುರುತಿಸಿ, ಸ್ಮರಣ ಸಂಚಿಕೆ ಲಹರಿ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕಡೇಶಿವಾಲಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾದ ಸುರೇಶ್ ಕನ್ನೊಟ್ಟು,ಸದಸ್ಯರಾದ ಸೀನ ನಾಯ್ಕ್ ನೆಕ್ಕಿಲಾಡಿ,ಪ್ರಮೀಳಾ ಕೋಡಿ, ವಶೀತ ನೆತ್ತರ, ನಿವೃತ್ತ ಯೋಧ ಕಿಟ್ಟಣ್ಣ ಶೆಟ್ಟಿ ಕುರುಮ್ಲಾಜೆ,ಕಡೇಶಿವಾಲಯ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ವಿದ್ಯಾಧರ ರೈ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶರತ್, ಕೆಮ್ಮಣ್ಣು ಪಲ್ಕೆ ಶಾಲಾ ಮುಖ್ಯ ಶಿಕ್ಷಕ ಉದಯ ಕುಮಾರ್ ಮೊದಲಾದರು ಪ್ರಸಿದ್ಧರಿದ್ದರು.

ಶಾಲಾ ಮಕ್ಕಳು ಪ್ರಾರ್ಥಿಸಿ,ಮುಖ್ಯ ಶಿಕ್ಷಕ ಬಾಬು ಪೂಜಾರಿ ಸ್ವಾಗತಿಸಿ,ಶಿಕ್ಷಕಿ ಮಮತಾ 2024 ನೇ ಸಾಲಿನ ಶಾಲಾ ವರದಿ ವಾಚಿಸಿ, ತರಗತಿವಾರು ಬಹುಮಾನಿತ ಮಕ್ಕಳ ಪಟ್ಟಿಯನ್ನು ಶಿಕ್ಷಕರುಗಳಾದ ಭಾಸ್ಕರ್ ನಾಯ್ಕ, ವಿರಾಜ್ ವಾಬಲೆ, ಪ್ರಜ್ಞ , ನಿಶಾ, ದೇವಕಿ, ಜ್ಯೋತಿ, ಅನ್ನಪೂರ್ಣ, ವಿದ್ಯಾ, ದಿವ್ಯ,ಗೀತಲಕ್ಷ್ಮಿ , ಅಶ್ವಿನಿ, ಪವನ, ವಾಚಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಎಂ ವಂದಿಸಿದರು. ಸಹ ಶಿಕ್ಷಕಿ ಪ್ರೇಮಕುಮಾರಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತ್ತು. ಮಕ್ಕಳು ಪ್ರಸ್ತುತಪಡಿಸಿದ ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿ ಉಳಿಸಿ ಎಂಬ ಕಿರು ನಾಟಕ ಪ್ರೇಕ್ಷಕರ ಗಮನಸೆಲೆಯಿತು.