ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಮೃತ ಭಾರತ ಸ್ಟೇಶನ್ ಸ್ಕೀಮ್ (ABSS) ಎರಡನೇ ಹಂತದಡಿ ದೇಶದಾದ್ಯಂತ ಒಟ್ಟು 75 ರೈಲು ನಿಲ್ದಾಣಗಳು ಅಭಿವೃದ್ಧಿಗೊಂಡಿದ್ದು, ನೈಋತ್ಯ ರೈಲ್ವೆ ವಲಯದ ನಾಲ್ಕು ನಿಲ್ದಾಣಗಳೂ ಇದರಲ್ಲಿ ಸೇರಿವೆ. ಈ ಎಲ್ಲ ನಿಲ್ದಾಣಗಳನ್ನು ಜುಲೈ 17ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ.
ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಕೊಪ್ಪಳ, ಬಾದಾಮಿ ಹಾಗೂ ಅಳ್ನಾವರ ರೈಲು ನಿಲ್ದಾಣಗಳೊಂದಿಗೆ ಮೈಸೂರು ವಿಭಾಗದ ಬಂಟ್ವಾಳ ರೈಲು ನಿಲ್ದಾಣವೂ ಈ ಪಟ್ಟಿಯಲ್ಲಿದೆ. ಅಳ್ನಾವರ ರೈಲು ನಿಲ್ದಾಣವನ್ನು ₹17.2 ಕೋಟಿ, ಬಾದಾಮಿಯನ್ನು ₹15.1 ಕೋಟಿ, ಕೊಪ್ಪಳವನ್ನು ₹21.14 ಕೋಟಿ ಹಾಗೂ ಬಂಟ್ವಾಳ ರೈಲು ನಿಲ್ದಾಣವನ್ನು ₹26.18 ಕೋಟಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿಪಡಿಸಲಾಗಿದೆ.
ಬಂಟ್ವಾಳ ರೈಲು ನಿಲ್ದಾಣದಲ್ಲಿ ಏನೆಲ್ಲ ಬದಲಾವಣೆ?
₹26.18 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಬಂಟ್ವಾಳ ರೈಲು ನಿಲ್ದಾಣವು ಆಧುನಿಕ ಸೌಲಭ್ಯಗಳೊಂದಿಗೆ ಪ್ರಯಾಣಿಕ ಸ್ನೇಹಿ ಕೇಂದ್ರವಾಗಿ ರೂಪುಗೊಂಡಿದೆ.
ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾಕೃತಿಗಳು ಗಮನ ಸೆಳೆಯುತ್ತವೆ. ನಿರೀಕ್ಷಣಾ ಮಂದಿರಗಳು ಮತ್ತು ಟಿಕೆಟ್ ಬುಕ್ಕಿಂಗ್ ಕೌಂಟರ್ಗಳನ್ನು ನವೀಕರಿಸಲಾಗಿದ್ದು, ಪ್ರಯಾಣಿಕರಿಗೆ ಉತ್ತಮ ಆಸನ ವ್ಯವಸ್ಥೆ ಸೇರಿದಂತೆ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ವಾಹನ ಸಂಚಾರ ಸುಗಮಗೊಳಿಸಲು ಡ್ರಾಪ್-ಆಫ್ ಹಾಗೂ ಪಿಕ್-ಅಪ್ ಪ್ರದೇಶಗಳನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದ್ದು, ಸುರಕ್ಷಿತ ಪೇ ಪಾರ್ಕಿಂಗ್ ವ್ಯವಸ್ಥೆಯನ್ನೂ ನಿರ್ಮಿಸಲಾಗಿದೆ.
ನಿಲ್ದಾಣದ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಸಂಪೂರ್ಣ ಆವರಣವನ್ನು ಸಿಸಿ ಕ್ಯಾಮೆರಾ ನಿಗಾದ ವ್ಯಾಪ್ತಿಗೆ ತರಲಾಗಿದೆ.
ಎಲ್ಲಾ ಹವಾಮಾನದಲ್ಲೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪೂರ್ಣ ಉದ್ದದ ಪ್ಲಾಟ್ಫಾರ್ಮ್ ಶೆಲ್ಟರ್ಗಳನ್ನು ನಿರ್ಮಿಸಲಾಗಿದೆ. ನಿಲ್ದಾಣದ ಮುಂಭಾಗದ ಪ್ಲಾಟ್ಫಾರ್ಮ್ ಮೇಲ್ಮೈ ಸುಧಾರಿಸಲಾಗಿದ್ದು, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.
ಒಳಾಂಗಣವನ್ನು ಆಧುನಿಕ ಫರ್ನಿಚರ್, ಸುಧಾರಿತ ಬೆಳಕು ವ್ಯವಸ್ಥೆ ಹಾಗೂ ಲ್ಯಾಂಡ್ಸ್ಕೇಪಿಂಗ್ ಮೂಲಕ ಆಕರ್ಷಕವಾಗಿ ರೂಪಿಸಲಾಗಿದೆ. ಪ್ರವೇಶ ಮತ್ತು ನಿರ್ಗಮನ ಕಮಾನುಗಳ ನಿರ್ಮಾಣದಿಂದ ನಿಲ್ದಾಣಕ್ಕೆ ವಿಶಿಷ್ಟ ವಾಸ್ತುಶೈಲಿಯ ರೂಪ ದೊರೆತಿದೆ.
ಉನ್ನತ ಮಟ್ಟದ ಬೆಳಕು ವ್ಯವಸ್ಥೆ, ಎಲ್ಇಡಿ ಪ್ಲಾಟ್ಫಾರ್ಮ್ ಹೆಸರು ಫಲಕಗಳು, ಎಲ್ಇಡಿ ಸೂಚನಾ ಫಲಕಗಳು ಹಾಗೂ ಫಸಾಡ್ ಲೈಟಿಂಗ್ ಅಳವಡಿಸಲಾಗಿದ್ದು, ದೃಶ್ಯತೆ ಹೆಚ್ಚುವುದರ ಜೊತೆಗೆ ವಿದ್ಯುತ್ ಉಳಿತಾಯಕ್ಕೂ ನೆರವಾಗಲಿದೆ.
ಪ್ರಯಾಣಿಕರ ಮಾಹಿತಿಗಾಗಿ ಕೋಚ್ ಇಂಡಿಕೇಷನ್ ಬೋರ್ಡ್ಗಳು, ರೈಲು ಇಂಡಿಕೇಷನ್ ಬೋರ್ಡ್ಗಳು, ಸಾರ್ವಜನಿಕ ಘೋಷಣೆ (ಪಿಎ) ವ್ಯವಸ್ಥೆ ಹಾಗೂ ಗಡಿಯಾರಗಳನ್ನು ಅಳವಡಿಸಲಾಗಿದೆ.
ಎರಡನೇ ಪ್ಲಾಟ್ಫಾರ್ಮ್ನಿಂದ ಮೊದಲನೇ ಪ್ಲಾಟ್ಫಾರ್ಮ್ಗೆ ಸಂಪರ್ಕ ಕಲ್ಪಿಸಲು ಫುಟ್ ಓವರ್ ಬ್ರಿಡ್ಜ್ ನಿರ್ಮಿಸಲಾಗಿದ್ದು, ಮೆಟ್ಟಿಲು ಬಳಸಲು ಸಾಧ್ಯವಾಗದವರಿಗಾಗಿ ಲಿಫ್ಟ್ ವ್ಯವಸ್ಥೆಯನ್ನೂ ಒದಗಿಸಲಾಗಿದೆ.
ಪುರುಷರು, ಮಹಿಳೆಯರು ಹಾಗೂ ವಿಶೇಷ ಚೇತನರಿಗಾಗಿ ಪ್ರತ್ಯೇಕ ಶೌಚಗೃಹಗಳನ್ನು ನಿರ್ಮಿಸಲಾಗಿದ್ದು, ಕ್ಯಾಂಟೀನ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಬಂಟ್ವಾಳ ರೈಲು ನಿಲ್ದಾಣದ ಪುನರ್ ಅಭಿವೃದ್ಧಿ ಯೋಜನೆಯು ಪ್ರಯಾಣಿಕರ ಆರಾಮ, ಸುಗಮ ಸಂಚಾರ ಹಾಗೂ ಆಧುನಿಕ ಮೂಲಸೌಕರ್ಯಕ್ಕೆ ಆದ್ಯತೆ ನೀಡುವ ಮೂಲಕ ನಿಲ್ದಾಣವನ್ನು ಪರಿಣಾಮಕಾರಿ ಮತ್ತು ಪ್ರಯಾಣಿಕ ಸ್ನೇಹಿ ಕೇಂದ್ರವಾಗಿ ಪರಿವರ್ತಿಸಿದೆ ಎಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಪ್ರಚಾರ ನಿರೀಕ್ಷಕ ಎಚ್. ಶಿವಕುಮಾರ್ ಹಾಗೂ ಮನು ಎಚ್.ಆರ್. ಉಪಸ್ಥಿತರಿದ್ದರು.
ಇನ್ನೂ ಆಗಬೇಕಿರುವ ಕೆಲಸಗಳು
ಬಂಟ್ವಾಳ ರೈಲು ನಿಲ್ದಾಣ ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗಬೇಕಾದರೆ ಕೆಲವು ಪ್ರಮುಖ ಕ್ರಮಗಳು ಅಗತ್ಯವೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ರಾಜಕೀಯ ರಹಿತವಾಗಿ ನಾಗರಿಕರ ರಕ್ಷಾ ಸಮಿತಿಯನ್ನು ಪುನರ್ ಸಂಘಟಿಸಿ ನಿಲ್ದಾಣದ ಅಭಿವೃದ್ಧಿಗೆ ಜನಸಹಭಾಗಿತ್ವವನ್ನು ಹೆಚ್ಚಿಸಬೇಕಿದೆ.
ಎರಡನೇ ಪ್ಲಾಟ್ಫಾರ್ಮ್ಗೆ ರೈಲುಗಳ ಆಗಮನವನ್ನು ಹೆಚ್ಚಿಸುವ ಅಗತ್ಯವಿದೆ.
ಎರಡನೇ ಪ್ಲಾಟ್ಫಾರ್ಮ್ನಿಂದ ಕೈಕುಂಜ ಮಾರ್ಗವಾಗಿ ಬಿ.ಸಿ.ರೋಡ್ ಪೇಟೆ ಹಾಗೂ ಬಸ್ ನಿಲ್ದಾಣಕ್ಕೆ ನಡೆದು ಹೋಗುವಷ್ಟು ಸಮೀಪದಲ್ಲಿರುವುದರಿಂದ, ಆ ರಸ್ತೆಯನ್ನು ಅಭಿವೃದ್ಧಿಪಡಿಸಿ ಪ್ರಯಾಣಿಕರಿಗೆ ಸೂಕ್ತ ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕಿದೆ. ಇದರಿಂದ ರೈಲಿನಿಂದ ಇಳಿಯುವ ಪ್ರಯಾಣಿಕರಿಗೆ ಗೊಂದಲ ಉಂಟಾಗುವುದನ್ನು ತಪ್ಪಿಸಬಹುದು.
ರೈಲು ನಿಲ್ದಾಣದ ಮಾಹಿತಿಗಾಗಿ ವಿವಿಧ ಮೊಬೈಲ್ ಆ್ಯಪ್ಗಳು ಲಭ್ಯವಿದ್ದರೂ, ಸಾರ್ವಜನಿಕರ ಅನುಕೂಲಕ್ಕಾಗಿ ನಿಲ್ದಾಣದ ದೂರವಾಣಿ ಸಂಖ್ಯೆಯನ್ನು ಸುಲಭವಾಗಿ ದೊರಕುವಂತೆ ಮಾಡಬೇಕಿದೆ.
ತುರ್ತು ಸಂದರ್ಭಗಳಲ್ಲಿ ನೆರವಾಗುವಂತೆ ನಿಲ್ದಾಣದಲ್ಲಿ ನಮೂದಿಸಲಾದ ವೈದ್ಯರು ಸೇವೆಗೆ ಲಭ್ಯರಾಗುವ ವ್ಯವಸ್ಥೆಯೂ ಪರಿಣಾಮಕಾರಿಯಾಗಿ ಜಾರಿಯಲ್ಲಿರಬೇಕಿದೆ. ವೈದ್ಯರ ಅನುಪಸ್ಥಿತಿಯಲ್ಲಿ ಪ್ರಯಾಣಿಕರು ಸಂಕಷ್ಟ ಎದುರಿಸುವ ಸಾಧ್ಯತೆ ಇರುವುದರಿಂದ ಈ ವ್ಯವಸ್ಥೆಗೆ ಹೆಚ್ಚಿನ ಗಮನ ಅಗತ್ಯವಾಗಿದೆ.
