ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಾಯಿಕಟ್ಟೆ ಪ್ರದೇಶದಲ್ಲಿ ಹರಿಯುವ ಪಾಲ್ಗುಣಿ ನದಿಗೆ ಸಮೀಪದ ಕೈಗಾರಿಕೆಗಳಿಂದ ವಿಷಕಾರಿ ರಾಸಾಯನಿಕ ಮತ್ತು ತ್ಯಾಜ್ಯಗಳನ್ನು ಅನಧಿಕೃತವಾಗಿ ಬಿಡಲಾಗುತ್ತಿದೆ.
ಇದರಿಂದಾಗಿ ನದಿ ನೀರು ತೀವ್ರವಾಗಿ ಮಲಿನಗೊಂಡಿದ್ದು, ನೀರಿನ ಬಣ್ಣ ಬದಲಾಗಿ ಪರಿಸರದಲ್ಲಿ ತೀವ್ರ ದುರ್ವಾಸನೆ ಹರಡುತ್ತಿದೆ. ತಣ್ಣೀರುಬಾವಿ ಸೇತುವೆ ಕಾಮಗಾರಿಗಾಗಿ ನದಿಯ ಹರಿವನ್ನು ತಾತ್ಕಾಲಿಕವಾಗಿ ತಡೆಹಿಡಿದಾಗ, ಕೇವಲ ಐದು ದಿನಗಳಲ್ಲಿ ಈ ಆಘಾತಕಾರಿ ಸತ್ಯ ಬಹಿರಂಗಗೊಂಡಿದೆ. ಈ ಮೊದಲು ಈ ವಿಷಕಾರಿ ತ್ಯಾಜ್ಯಗಳು ನೇರವಾಗಿ ಸಮುದ್ರಕ್ಕೆ ಸೇರುತ್ತಿದ್ದವು.
ನದಿಯಲ್ಲಿ ನೂರಾರು ಮೀನುಗಳು, ಹಾವುಗಳು ಹಾಗೂ ಇತರ ಜಲಚರಗಳು ಸತ್ತು ತೇಲುತ್ತಿರುವುದು ಜಲಚರಗಳ ಮಾರಣಹೋಮವನ್ನು ಸಾರುತ್ತಿದೆ. ಕಲುಷಿತ ನೀರಿನಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ಜ್ವರ, ಹೊಟ್ಟೆ ಸಂಬಂಧಿತ ಕಾಯಿಲೆ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಇದು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿದೆ. ಇದನ್ನೂ ಓದಿ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ಮಂಗಳೂರು ನಗರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗಾಗಿ ನಿರ್ಮಿಸಲಾದ 12 ಪೊಲೀಸ್ ವಸತಿ ಗೃಹಗಳ ಉದ್ಘಾಟನೆ ಹಾಗೂ 54 ವಸತಿಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ
ಈ ಕೃತ್ಯವು ಭಾರತೀಯ ನ್ಯಾಯ ಸಂಹಿತೆ (BNS) 2023 ರ ವಿವಿಧ ಸೆಕ್ಷನ್‌ಗಳ ಉಲ್ಲಂಘನೆಯಾಗಿದ್ದು, ನಾಗರಿಕರ ಮೂಲಭೂತ ಹಕ್ಕಿನ ಹರಣವಾಗಿದೆ. ಈ ಗಂಭೀರ ಪರಿಸ್ಥಿತಿಯ ಕುರಿತು ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ವು ಜಿಲ್ಲಾಧಿಕಾರಿಗಳಾದ ಶ್ರೀ. ರಾಜು ಕೆ ಇವರಿಗೆ ಮನವಿ ಸಲ್ಲಿಸಿ ತಕ್ಷಣದ ಕ್ರಮಕ್ಕೆ ಆಗ್ರಹಿಸಿದೆ.
