ಮೈಸೂರು ಮಾನಸ ಗಂಗೋತ್ರಿ ಸಭಾಂಗಣದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಇಂದು ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಸಿ.ಎಂ.ಸಿದ್ಧರಾಮಯ್ಯ ಉದ್ಘಾಟಿಸಿದರು.

ಬಳಿಕ ಪ್ರಶಸ್ತಿ ವಿತರಿಸಿ ಮಾತನಾಡಿ. ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕದಿದ್ದರೆ ಸಮಾಜದ ಪ್ರತಿಯೊಬ್ಬರ ನೆಮ್ಮದಿ ಹಾಳಾಗುತ್ತದೆ. ಯಾರೊಬ್ಬರೂ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ವಾಕ್ ಸ್ವಾತಂತ್ರ್ಯ ನಮಗೆ ನಮ್ಮ‌ ಸಂವಿಧಾನ ನೀಡಿರುವ ಅತ್ಯುನ್ನತ ಮೌಲ್ಯ. ಸಂವಿಧಾನದ ಮೂರು ಅಂಗಗಳಿಗೆ ಅಪಾಯ ಬಂದರೆ ಸಮಾಜಕ್ಕೆ ಅಪಾಯ ಬಂದಂತೆ. ವಾಕ್ ಸ್ವಾತಂತ್ರ್ಯ ಆಚರಿಸುವ ಪತ್ರಿಕಾ ರಂಗಕ್ಕೆ ಯಾವ ನಿರ್ಬಂಧಗಳೂ ಇರಬಾರದು ಎನ್ನುವುದನ್ನು ಪಂಡಿತ್ ನೆಹರೂ ಅವರೂ ಒತ್ತಿ ಹೇಳಿದ್ದರು.

ಕೆಲವು ತಿಂಗಳ ಹಿಂದೆ “ನಾನು ಸದನದಲ್ಲಿ ಮಾತನಾಡುವಾಗ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಡಿದ ಮಾತನ್ನು ಉದಾಹರಿಸಿದ್ದೆ. ” ಸಾಲ ಮನ್ನಾ ಮಾಡೋದಕ್ಕೆ ನಮ್ಮ ಬಳಿ ಪ್ರಿಂಟಿಂಗ್ ಮೆಷಿನ್ ಇದೆಯಾ” ಎಂದು ಯಡಿಯೂರಪ್ಪ ಅವರು ಸದನದಲ್ಲೇ ಹೇಳಿದ್ದರು. ಈ ಮಾತನ್ನು ನಾನು ಉದಾಹರಿಸಿದ್ದೆ. ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ನಾನೇ ಆ ಮಾತು ಹೇಳಿದ್ದಾಗಿ ನಕಲಿ‌ ಸುದ್ದಿ ಸೃಷ್ಟಿಸಿ, ಅದಕ್ಕೆ ಗ್ಯಾರಂಟಿ ಯೋಜನೆಗಳನ್ನು ಬೆರೆಸಿ ತಪ್ಪು ಸಂದೇಶ ಹರಡಿದರು. ಇದರಿಂದ ನಷ್ಟ ಆಗಿದ್ದು ಸಮಾಜಕ್ಕೇ ಹೊರತು ನನಗಲ್ಲ ಎಂದರು.

ಫೇಕ್ ನ್ಯೂಸ್ ಸೃಷ್ಟಿಕರ್ತರಿಗೆ ಕಠಿಣ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ನಾವು ಕಾನೂನು ಮಾಡಿದ್ದೇವೆ. ಆದರೆ ಕೇವಲ ಕಾನೂನಿನಿಂದ ಮಾತ್ರ ಫೇಕ್ ನ್ಯೂಸ್ ತಡೆಯಲು ಸಾಧ್ಯವಿಲ್ಲ. ಇಡೀ ಸಮಾಜ ಇದರ ವಿರುದ್ಧ ಧ್ವನಿ ಎತ್ತಿದರೆ ಮಾತ್ರ ಸಾಧ್ಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಪ್ರಜಾವಾಣಿ ಪತ್ರಿಕೆ ಸಂಪಾದಕರಾದ ರವೀಂದ್ರ ಭಟ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ್, ಶಾಸಕರಾದ ರವಿಶಂಕರ್, ತನ್ವೀರ್ ಸೇಠ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ದೀಪಕ್, ಕಾರ್ಯದರ್ಶಿ ರವಿ ಪಾಂಡವಪುರ ಸೇರಿ ಪದಾಧಿಕಾರಿಗಳು, ನ್ಯೂಸ್ ಫಸ್ಟ್ ಸಿಇಒ ರವಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.