ನವದಹೆಲಿ: ನಕಲಿ ನೋಟುಗಳ (Fake Notes) ಹಾವಳಿ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಚಲಾವಣೆಯಾಗುತ್ತಿರುವ 500 ರೂ. ಮುಖಬೆಲೆ ನಕಲಿ ನೋಟಿನ ಬಗ್ಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೈ ಅಲರ್ಟ್ ನೀಡಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (DRI), ಹಣಕಾಸು ಗುಪ್ತಚರ ಘಟಕ (FIU), ಕೇಂದ್ರ ತನಿಖಾ ದಳ (CBI), ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಭಾರತೀಯ ಭದ್ರತಾ ಪತ್ರಗಳು ಮತ್ತು ವಿನಿಮಯ ಮಂಡಳಿ (SEBI) ಮತ್ತು ಇತರ ಪ್ರಮುಖ ಹಣಕಾಸು ಮತ್ತು ನಿಯಂತ್ರಕ ಸಂಸ್ಥೆಗಳಿಗೆ ಈ ಎಚ್ಚರಿಕೆ ನೀಡಲಾಗಿದೆ. ನಕಲಿ ನೋಟುಗಳು ಯಾವುವು, ನಿಜವಾದ ನೋಟುಗಳು ಯಾವುವು ಎಂಬುದನ್ನು ಗುರುತಿಸಲು ಜನರಿಗೆ ಅರಿವು ಮೂಡಿಸುವಂತೆ ಸೂಚನೆ ನೀಡಿದೆ.
ನಕಲಿ ನೋಟನ್ನು ಗುರುತಿಸುವುದು ಹೇಗೆ?
500 ರೂ. ಮುಖಬೆಲೆಯ ನಕಲಿ ನೋಟುಗಳು, ಅಧಿಕೃತ ನೋಟುಗಳ ಗುಣಮಟ್ಟ ಮತ್ತು ಮುದ್ರಣವನ್ನು ಬಹುತೇಕ ಹೋಲುತ್ತವೆ. ಆದ್ದರಿಂದ ಸಾಮಾನ್ಯ ವ್ಯಕ್ತಿಗೆ ಅದನ್ನು ಗುರುತಿಸುವುದು ತುಂಬಾ ಕಷ್ಟ. ಬ್ಯುಸಿ ಸಂದರ್ಭದಲ್ಲಿ ವಹಿವಾಟು ನಡೆಸುವಾಗ ನಕಲಿ ನೋಟುಗಳನ್ನು ಗಮನಿಸಲು ಸಾಧ್ಯವಾಗಿರುವುದಿಲ್ಲ. ಹೀಗಾಗಿ, ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಇದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ನಕಲಿ ನೋಟುಗಳನ್ನು ಪತ್ತೆ ಮಾಡುವುದು ಹೇಗೆ?
* ಭದ್ರತಾ ಥ್ರೆಡ್ ಪರಿಶೀಲಿಸಿ: ಅಸಲಿ 500 ರೂ. ಮುಖಬೆಲೆ ನೋಟುಗಳು ಭದ್ರತಾ ಥ್ರೆಡ್ ಅನ್ನು ಹೊಂದಿದ್ದು, ನೋಟು ಓರೆಯಾಗಿಸಿದಾಗ ಅದು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬಣ್ಣವನ್ನು ಬದಲಾಯಿಸುತ್ತದೆ. ಈ ಥ್ರೆಡ್‌ನಲ್ಲಿ ‘ಭಾರತ’ ಮತ್ತು ‘RBI’ ನಂತಹ ಗೋಚರ ಶಾಸನಗಳಿವೆ. ನಕಲಿ ನೋಟುಗಳು ಈ ಬಣ್ಣ ಬದಲಾವಣೆ ಕಂಡುಬರುವುದಿಲ್ಲ.
* ವಾಟರ್‌ಮಾರ್ಕ್ ಗಮನಿಸಿ: ಮಹಾತ್ಮ ಗಾಂಧಿಯವರ ಭಾವಚಿತ್ರ ಮತ್ತು ಮುಖಬೆಲೆಯ 500 ಅನ್ನು ತೋರಿಸುವ ಎಲೆಕ್ಟ್ರೋಟೈಪ್ ವಾಟರ್‌ಮಾರ್ಕ್ ಅನ್ನು ನೋಡಲು ನೋಟನ್ನು ಬೆಳಕಿಗೆ ಎದುರಾಗಿ ಹಿಡಿದುಕೊಳ್ಳಿ. ನಕಲಿ ನೋಟುಗಳು ಮಸುಕಾದ ಅಥವಾ ತಪ್ಪಾಗಿ ಜೋಡಿಸಲಾದ ವಾಟರ್‌ಮಾರ್ಕ್‌ಗಳನ್ನು ಹೊಂದಿರುತ್ತದೆ.
* ಮುದ್ರಣದಲ್ಲಿ ವ್ಯತ್ಯಾಸ: ಅಸಲಿ 500 ರೂ. ನೋಟುಗಳಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರ, ಅಶೋಕ ಸ್ತಂಭದ ಲಾಂಛನ ಮುಂತಾದ ಪ್ರಮುಖ ಅಂಶಗಳ ಮೇಲೆ ಇಂಟ್ಯಾಗ್ಲಿಯೊ (ಎತ್ತರದ) ಮುದ್ರಣವಿರುತ್ತದೆ. ಈ ಪ್ರದೇಶಗಳ ಮೇಲೆ ನಿಮ್ಮ ಬೆರಳುಗಳನ್ನು ಚಲಾಯಿಸಿ, ಅದು ಏನೂ ಅನುಭವಕ್ಕೆ ಬಾರದಿದ್ದರೆ ನೋಟು ನಕಲಿಯಾಗಿರುತ್ತದೆ.
* ಆರ್‌ಬಿಐನ ಮೊಬೈಲ್ ಅಪ್ಲಿಕೇಶನ್ ಅಥವಾ ಯುವಿ ಲೈಟ್ ಬಳಸಿ: ತ್ವರಿತ ಪರಿಶೀಲನೆಗಾಗಿ, ನಿಜವಾದ ನೋಟುಗಳನ್ನು ಸ್ಕ್ಯಾನ್ ಮಾಡಲು ಮತ್ತು ಗುರುತಿಸಲು ಆರ್‌ಬಿಐನ ‘ಮನಿ’ ಅಪ್ಲಿಕೇಶನ್ ಬಳಸಿ. ನೀವು ಯುವಿ ಬೆಳಕಿನ ಅಡಿಯಲ್ಲಿ ನೋಟನ್ನು ಸಹ ಪರಿಶೀಲಿಸಬಹುದು. ಸರಣಿ ಸಂಖ್ಯೆಗಳು ಮತ್ತು ಭದ್ರತಾ ದಾರವು ಹೊಳಪಿನ ವೈಶಿಷ್ಟ್ಯತೆ ಇರುತ್ತದೆ. ಇದು ನಕಲಿ ನೋಟಲ್ಲಿ ಕಂಡುಬರುವುದಿಲ್ಲ.
ಗೃಹ ಸಚಿವಾಲಯದಿಂದ ರಾಷ್ಟ್ರವ್ಯಾಪಿ ಎಚ್ಚರಿಕೆ
ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಮತ್ತು ಇತರ ಸಂಬಂಧಿತ ಏಜೆನ್ಸಿಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ. ಏಕೆಂದರೆ ಈ ನಕಲಿ ನೋಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಚಲಾವಣೆಯಲ್ಲಿರಬಹುದು ಎನ್ನಲಾಗಿದೆ.