ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಬಿಜೆಪಿ ನಾಯಕರನ್ನು ಕೆರಳಿಸಿದೆ. ಪ್ರಭಾಕರ್ ಭಟ್ ಹಾಗೂ ಹಿಂದೂ ಮುಖಂಡರ ಮೇಲಿನ ಕೇಸ್‌ಗಳನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಬಿಜೆಪಿ ನಾಯಕರು ಎಚ್ಚರಿಸಿದರು.
ಬೆಂಗಳೂರಿನಲ್ಲಿ ( ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ , ಹಿಂದೂಗಳನ್ನ ಟಾರ್ಗೆಟ್ ಮಾಡಲು, ಮುಸ್ಲಿಮರನ್ನು ಓಲೈಸಲು ಸರ್ಕಾರ ಟಾಸ್ಕ್ ಫೋರ್ಸ್ ರಚಿಸಿದೆ. ಕಲ್ಕಡ್ಕ ಪ್ರಭಾಕರ್ ಭಟ್ ಅವರ ಮೇಲಿನ ಎಫ್‌ಐಆರ್ ಹಾಗೂ ಹಿಂದೂ ಕಾರ್ಯಕರ್ತರ ಬಂಧನ ಖಂಡನೀಯ. ಈ ಕೇಸ್‌ಗಳನ್ನು ವಾಪಸ್ ಪಡೆಯಿರಿ. ಇಲ್ಲದಿದ್ರೆ ಬಿಜೆಪಿ ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ಮಾಡಲಿದೆ. ನಮ್ಮ ಕಾರ್ಯಕರ್ತರ ವಿರುದ್ಧ ಕೇಸ್ ಹಾಕೋದನ್ನು ನಾವು ಸಹಿಸಲ್ಲ ಎಂದು ಗುಡುಗಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಪೊಲೀಸ್ ವ್ಯವಸ್ಥೆ ಹಿಂದೂ ಸಂಘಟಕರಿಗೆ ನಿರಂತರ ಕಿರುಕುಳ ನೀಡುತ್ತಾ, ಸುಳ್ಳು ಕೇಸ್‌ಗಳನ್ನು ದಾಖಲಿಸುತ್ತಿದೆ. ಮುಸ್ಲಿಂ ಸಮುದಾಯದ ಒತ್ತಾಯಕ್ಕೆ ಬೆದರಿ ದಿಢೀರನೇ ಮಂಗಳೂರು ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ವರಿಷ್ಠಾಧಿಕಾರಿಯನ್ನು ಸರ್ಕಾರ 24 ಗಂಟೆಯೊಳಗೆ ವರ್ಗಾವಣೆ ಮಾಡಿತ್ತು. ಇದರ ಬೆನ್ನಲ್ಲೇ ಹಿಂದೂ ಸಮಾಜದ ಮುಖ್ಯಸ್ಥರ ವಿರುದ್ಧ ಸುಳ್ಳು ಕೇಸ್‌ಗಳನ್ನು ದಾಖಲಿಸಿ ಜೈಲಿಗೆ ದೂಡುವ ಪಿತೂರಿ ನಡೆಯುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ :Chikkaballapura | ಲಾಂಗ್‌ನಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ – ಆಟೋ ಚಾಲಕ ಅರೆಸ್ಟ್
ಹಿಂದೂ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ಮನೆ, ಮನೆಗಳನ್ನು ಶೋಧಿಸಿ ಆತಂಕದ ವಾತಾವರಣ ಸೃಷ್ಟಿಸುತ್ತಿರುವುದು ಅತ್ಯಂತ ಖಂಡನೀಯ. ಕರಾವಳಿ ಪ್ರದೇಶದ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡಿ ದಕ್ಷಿಣ ಕನ್ನಡ ಹಾಗೂ ಉಡುಪಿಯನ್ನು ಭಯ ಪೀಡಿತ ಜಿಲ್ಲೆಗಳನ್ನಾಗಿಸಲು ರಾಜ್ಯ ಸರ್ಕಾರ ಹೊರಟಿದೆ. ಈ ಕೂಡಲೇ ಕಲ್ಲಡ್ಕ ಪ್ರಭಾಕರ್ ಭಟ್ ಅವರೂ ಸೇರಿದಂತೆ 15ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಪ್ರಮುಖರ ಮೇಲೆ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಿ ಗಡೀಪಾರು ಆದೇಶ ಹಿಂಪಡೆಯಲಿ. ಇಲ್ಲವಾದರೆ ಮುಂದಿನ ಪರಿಣಾಮಗಳಿಗೆ ಸರ್ಕಾರವೇ ಜವಾಬ್ದಾರಿಯಾಗಬೇಕಾದೀತು ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತಾಡಿ, ಕರಾವಳಿಯ ಮುಸ್ಲಿಂ ಮುಖಂಡರ ಬ್ಲಾಕ್‌ಮೇಲ್‌ಗೆ ಹೆದರಿ ಹಿಂದೂ, ಬಿಜೆಪಿ ನಾಯಕರನ್ನು ಗಡೀಪಾರು ಮಾಡೋದು, ಎಫ್‌ಐಆರ್ ಹಾಕುವ ಕೆಲಸ ಸರ್ಕಾರ ಮಾಡ್ತಿದೆ. ಸುಹಾಸ್ ಶೆಟ್ಟಿ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದವರನ್ನು ಹುಡುಕಿ ಎಫ್‌ಐಆರ್ ಹಾಕ್ತಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಹಿಂದೂ ನಾಯಕರನ್ನು, ಕಾರ್ಯಕರ್ತರನ್ನು ಮುಟ್ಟಿದರೆ ನಾವು ಸರ್ಕಾರವನ್ನೇ ಮುಟ್ಟಬೇಕಾಗುತ್ತದೆ ಎಂದು ಕಿಡಿಕಾರಿದರು.
ಈ ಕುರಿತು ಶಾಸಕ ಸುನೀಲ್ ಕುಮಾರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಪೊಲೀಸ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿದೆ. ಅಷ್ಟಕ್ಕೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷ ಹಾಗೂ ಹಿಂಸೆಗೆ ಪ್ರೇರಣೆ ನೀಡಿದವರು ಯಾರು? ತಲ್ವಾರ್, ಕತ್ತಿ ಝಳಪಿಸಿ ಹತ್ಯೆಯ ಮಾತುಗಳನ್ನು ಆಡಿದವರನ್ನು ಪೊಲೀಸರು ಏಕೆ ಮುಟ್ಟುತ್ತಿಲ್ಲ? ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಿದವರಿಗೆ, ಸೋಶಿಯಲ್ ಮೀಡಿಯಾದಲ್ಲಿ ಸಂದೇಶ ರವಾನಿಸಿದವರ ಮೇಲೆ ಮಾತ್ರ ನಿಮ್ಮ ಕಾನೂನು ಕ್ರಮವೇ? ಪೊಲೀಸರ ಈ ಕ್ರಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತಷ್ಟು ಪ್ರಕ್ಷುಬ್ಧತೆ ಮೂಡಿಸುವುದಕ್ಕೆ ಕಾರಣವಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.