ಬಂಟ್ವಾಳ: ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕ್ಷಯ ಮುಕ್ತ ಭಾರತ ಅಭಿಯಾನದ ಅಂಗವಾಗಿ ನಿಕ್ಷಯ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಆಹಾರ ಧವಸ-ಧಾನ್ಯ ವಿತರಣಾ ಕಾರ್ಯಕ್ರಮ ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿ ದ.ಕ.ಜಿಲ್ಲಾ ಧರ್ಮ ಜಾಗರಣ ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಮಾತನಾಡಿ, ಸರಕಾರದ ರಾಷ್ಟ್ರೀಯ ಯೋಜನೆಯನ್ನು ಅರ್ಥ ಮಾಡಿಕೊಂಡು ಅದನ್ನು ಸಮಾಜದ ಮಂದಿಗೆ ತಲುಪಿಸುವ ಕಾರ್ಯ ಇಲ್ಲಿ ನಡೆದಿದ್ದು, ಕೃಷ್ಣಕುಮಾರ್ ಪೂಂಜ ನೇತೃತ್ವದ ತಂಡ ಮನುಷ್ಯ ಜನ್ಮದ ಸಾರ್ಥಕತೆಯ ಸೇವೆಯನ್ನು ಮಾಡುತ್ತಿದೆ ಎಂದರು.
ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ವಸಂತಕುಮಾರ್ ಶೆಟ್ಟಿ ಮಾತನಾಡಿ, ಸೇವಾಂಜಲಿಯ ಸೇವೆಯ ಕುರಿತು ಅವರ ಬದ್ಧತೆಯ ಫಲವಾಗಿ ಕ್ಷಯ ರೋಗಿಗಳಿಗೆ ಆಹಾರ ಕೊಡುವ ಬೇರೆ ಯಾವ ಸಂಸ್ಥೆಯೂ ಮಾಡದ ಕಾರ್ಯ ನಡೆದಿದ್ದು, ಇದು ಎಲ್ಲಾ ಸಂಘ ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ ಪ್ರಸ್ತಾವನೆಗೈದು, ಕಳೆದ ೨೦ ತಿಂಗಳಲ್ಲಿ ಸುಮಾರು ೧೧೩ಗೆ ಮಂದಿ ಕ್ಷಯ ರೋಗಿಗಳಿಗೆ ೭ ಲಕ್ಷ ರೂ.ಗಳ ಕಿಟ್ ವಿತರಿಸಲಾಗಿದ್ದು, ಒಬ್ಬ ರೋಗಿಗೆ ತಲಾ ೬ ಸಾವಿರ ರೂ. ವ್ಯಯಿಸಲಾಗುತ್ತಿದೆ ಎಂದರು.
ಪ್ರಮುಖರಾದ ನಾರಾಯಣ ಬಡ್ಡೂರು, ಸುರೇಶ್ ನಡುಬೈಲು, ಸುರೇಶ್ ರೈ ಪೆಲಪ್ಪಾಡಿ, ಪ್ರಕಾಶ್ ಕಿದೆಬೆಟ್ಟು, ಪೂಜೇಶ್ ರಾಮಲ್‌ಕಟ್ಟೆ, ವಿಕ್ರಮ್ ಬರ್ಕೆ, ದೇವಸ್ಯ ಬಾಲಕೃಷ್ಣ ರೈ, ಸದಾನಂದ ತುಂಬೆ, ಧನರಾಜ್ ತುಂಬೆ, ಪ್ರವೀಣ್ ಕಬೆಲ, ಅಮರನಾಥ ಆಳ್ವ ಸುಜೀರ್, ಮಾಧವ ದೋಟ, ಪ್ರವೀಣ್ ಮಯ್ಯಾಡಿ, ಉಮೇಶ್ ಸೇಮಿತ ತುಪ್ಪೆಕಲ್ಲು, ಶಿವರಾಜ್ ಸುಜೀರು ಮೊದಲಾದವರಿದ್ದರು.