ಪಿರಿಯಾಪಟ್ಟಣ ತಾಲ್ಲೂಕಿನ 79 ಗ್ರಾಮಗಳ 150 ಕೆರೆ – ಕಟ್ಟೆಗಳಿಗೆ ಕಾವೇರಿ ನದಿಯ ನೀರು ತುಂಬಿಸುವ ಯೋಜನೆಯನ್ನು ಸಿ.ಎಂ.ಸಿದ್ಧರಾಮಯ್ಯ ಉದ್ಘಾಟಿಸಿದರು.

ಬಳಿಕ ಮಾತನಾಡಿ ಪಿರಿಯಾಪಟ್ಟಣದ ಜನ, ಜಾನವಾರು, ಕೃಷಿಯ ಅನುಕೂಲಕ್ಕಾಗಿ ಮತ್ತು ಇಲ್ಲಿನ ಅಂತರ್ಜಲ ಹೆಚ್ಚಳಕ್ಕೆ ನಾನೇ ಶಂಕುಸ್ಥಾಪನೆ ಮಾಡಿ ನಾನೇ ಈಗ ಈ ಯೋಜನೆಯನ್ನು ಉದ್ಘಾಟಿಸಿದ್ದೇನೆ. 79 ಹಳ್ಳಿ 93 ಸಾವಿರ ಜನರಿಗೆ ಇದರಿಂದ ಲಾಭ ಆಗುತ್ತಿದೆ. ಇದು ನಮ್ಮ ಸರ್ಕಾರ ಪಿರಿಯಾಪಟ್ಟಣದಲ್ಲಿ ನಿರ್ವಹಿಸಿದ ಜವಾಬ್ದಾರಿ ಎಂದರು.

ನಮ್ಮ ಸರ್ಕಾರದ ಒಂದು ಯೋಜನೆ ಕೋಲಾರ, ಚಿಕ್ಕಬಳ್ಳಾಪುರದ ಕೆರೆಗಳಿಗೆ ಮರು ಹುಟ್ಟು ನೀಡಿದೆ. ಇದೇ ರೀತಿ ಪಿರಿಯಾಪಟ್ಟಣದ ಕೆರೆಗಳಿಗೆ ಮರು ಜೀವ ನೀಡಿ ಇಲ್ಲಿನ ಅಂತರ್ಜಲ ವೃದ್ಧಿಗೆ ಈ ಯೋಜನೆ ಜೀವದಾನವಾಗಲಿದೆ.
ನುಡಿದಂತೆ ನಡೆಯೋದು, ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ನಮ್ಮ ಸರ್ಕಾರದ ಸಂಸ್ಕಾರ ಎಂದರು.

ರಾಜ್ಯದಲ್ಲಿ ತೀವ್ರ ಬರಗಾಲ ಇದ್ದರೂ ಜನ ಜಾನವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ, ಜನರು ಗುಳೆ ಹೋಗದಂತೆ ತಡೆದಿದ್ದೇವೆ. ಇದು ನಮ್ಮ ಸಾಧನೆ. ಕಳೆದ ವರ್ಷ ಸೆಪ್ಟೆಂಬರ್ ನಿಂದ ಇವತ್ತಿನವರೆಗೂ ನಾವು ರಾಜ್ಯದ ಪಾಲಿನ ಬರ ಪರಿಹಾರದ ಹಣವನ್ನು ಕೊಡಿ ಎಂದು ಪತ್ರ ಬರೆಯುತ್ತಿದ್ದೇವೆ. ನಾವೇ ಖುದ್ದಾಗಿ ಹೋಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿದರೂ ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿಯನ್ನು ರಾಜ್ಯಕ್ಕೆ ನೀಡಿಲ್ಲ ಎಂದರು.

ರಾಜ್ಯದ ಒಂದು ಕೋಟಿ 30 ಲಕ್ಷ ಕುಟುಂಬಗಳ ನಾಲ್ಕೂವರೆ ಕೋಟಿ ಜನರಿಗೆ ಪ್ರತೀ ತಿಂಗಳು 4 ರಿಂದ 6 ಸಾವಿರ ರೂಪಾಯಿ ಕೈ ಸೇರುವ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದೇವೆ. ಇಲ್ಲಿಯವರೆಗೂ 139 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣ ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು ಜಮೆ ಆಗುತ್ತಿದೆ. ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದರು.