ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಪ್ರವಾಹ ಪೀಡಿತ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ,

ಹಿಂದೆ ಬಿ.ಎಸ್.ಯಡಿಯೂರಪ್ಪನವರು ಸಂಪೂರ್ಣ ಮನೆ ಹಾನಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಈ ನೆರವಿನ ದುರುಪಯೋಗವಾಯಿತು ಹಾಗೂ ಹಲವರಿಗೆ ಮೊದಲನೇ ಕಂತು ಮಾತ್ರ ಬಿಡುಗಡೆಯಾಗಿ, ಎರಡು ಹಾಗೂ ಮೂರನೇ ಕಂತಿನ ಪರಿಹಾರ ಈ ವರೆಗೂ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ 1.2 ಲಕ್ಷ ರೂ. ಪರಿಹಾರ ಹಾಗೂ ಮನೆ ನೀಡುವ ನಿರ್ಧಾರ ಮಾಡಿದೆ ಎಂದರು.

ಜನರ ಸಹಕಾರವಿದ್ದರೆ ಪದೇ ಪದೇ ಮುಳುಗಡೆಯಾಗುವ ಹಳ್ಳಿಗಳ ಸ್ಥಳಾಂತರ ಮಾಡುವ ಮೂಲಕ ಶಾಶ್ವತ ಪರಿಹಾರ ಒದಗಿಸಲು ಚಿಂತನೆ ಮಾಡಲಾಗುವುದು.

ರಾಜ್ಯದ ಹಲವೆಡೆ ಮಳೆಯಿಂದ ಹಾನಿಯಾಗಿದೆ. ಎಲ್ಲ ಕಡೆ ಪರಿಹಾರ ಕೆಲಸಗಳನ್ನು ಪ್ರಾರಂಭಿಸಲಾಗಿದೆ. ಮೈಸೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಭೇಟಿ ನೀಡಲಾಗಿದ್ದು, ಮೃತಪಟ್ಟವರಿಗೆ ಹಾಗೂ ಜಾನುವಾರುಗಳು ಸತ್ತಿರುವುದಕ್ಕೆ ಕೂಡಲೇ ಪರಿಹಾರ ವಿತರಿಸಲಾಗುತ್ತಿದೆ. ಮನೆಗಳು ಬಿದ್ದಿರುವುದಕ್ಕೆ ಪರಿಹಾರ, ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌ ಗಳ ದುರಸ್ತಿ ಮೊದಲಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಬೆಳಗಾವಿಯಲ್ಲಿ ಕಳೆದ 42 ದಿನದಿಂದ ನಿರಂತರ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿಗಳಿಗೂ ರಜೆ ಘೋಷಣೆ ಮಾಡುವಂತೆ ಸೂಚಿಸಲಾಗಿದೆ.

ಮುಂದಿನ ವಾರ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಇದಕ್ಕಾಗಿ ಕಂದಾಯ, ವಿಪತ್ತು ನಿರ್ವಹಣೆ, ಅರಣ್ಯ ಇಲಾಖೆ, ಇಂಧನ, ನೀರಾವರಿ ಸೇರಿದಂತೆ ಎಲ್ಲ ಇಲಾಖೆಗಳು ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ ಎಂದರು.