ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಮಹತ್ತರ “ಪ್ರಸಾದ್ ಸ್ಕೀಮ್” ಯೋಜನೆಯಡಿ ಜಿಲ್ಲೆಯ ಹೆಮ್ಮೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು, “ದಕ್ಷಿಣಕಾಶಿ” ಎಂದೇ ಪ್ರಸಿದ್ಧಿಯಾಗಿರುವ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಕನಸಿನ “ಮಾಸ್ಟರ್ ಪ್ಲಾನ್” ಯೋಜನೆಯನ್ನು ಸದನದಲ್ಲಿ ಮಂಡಿಸಿರುತ್ತಾರೆ. ಇದು ಸಾಕಾರಗೊಂಡಲ್ಲಿ ದಕ್ಷಿಣ ಕರ್ನಾಟಕದಾದ್ಯಂತ ನಾನಾ ಪೂಜಾ ಕೈಂಕರ್ಯ ಕೈಗೊಳ್ಳಲು ಇಲ್ಲಿಗೆ ಬರುವ ಸಹಸ್ರಾರು ಭಕ್ತರಿಗೆ ಭಾರೀ ಅನುಕೂಲವಾಗಲಿದೆ.
ನೇತ್ರಾವತಿ ನದಿಗೆ ಪೆರ್ನೆ ಎಂಬಲ್ಲಿ ಕಿಂಡಿ ಅಣೆಕಟ್ಟು ಆದ ಕಾರಣ ಉದ್ಭವಲಿಂಗಕ್ಕೆ ಕಳೆದ 2 ವರ್ಷಗಳಿಂದ ಪೂಜೆ ಇಲ್ಲದಾಗಿದೆ. ಆದುದರಿಂದ ನದಿಯ ನಡುವಲ್ಲಿರುವ ಶಿವಲಿಂಗಕ್ಕೆ ಬಸವ ಕಲ್ಯಾಣದ ರೀತಿ ಸುತ್ತಲೂ ಕಾಂಕ್ರಿಟಿನ ತಡೆಗೋಡೆ ಮತ್ತು ಅಲ್ಲಿಗೆ ತೆರಳಲು ಕಾಲುಸಂಕದ ರಚನೆ ಇಲ್ಲಿ ಅತೀ ಹೆಚ್ಚಾಗಿ,ನಡೆಯುವ ಶ್ರಾದ್ಧಾ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ 2 ನದಿ ಸಂಗಮಗೊಳ್ಳುವಲ್ಲಿ ತರ್ಪಣ ಟವರ್ ನಿರ್ಮಾಣ ಮತ್ತು ಅಲ್ಲಿಗೆ ತೆರಳಲು ಕಾಲುಸಂಕ ಮತ್ತು ಅಲ್ಲಿ ಒಂದು ಶಿವ ದೇವರ ದೊಡ್ಡ ಮೂರ್ತಿ, ಪಿಂಡ ಪ್ರದಾನ ಮಾಡುವಲ್ಲಿನ ಪೂಜಾ ಕೈಂಕರ್ಯ ನಡೆಸಲು ಬೇಕಾದ ಮೋಕ್ಷಧಾಮವೆಂಬ ಕಟ್ಟಡ, ದೂರದ ಊರಿನಿಂದ ಬಂದವರಿಗೆ ಉಳಿದುಕೊಳ್ಳಲು ಯಾತ್ರಿ ನಿವಾಸ, ಅನ್ನಛತ್ರ, ಸ್ನಾನಘಟ್ಟ ಹಾಗೂ ಇನ್ನಿತರ ಕಾಮಗಾರಿಗಳ ಡಿ.ಪಿ.ಆರ್ ತಯಾರಿಸಲಾಗಿದ್ದು ಅದನ್ನು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಮೂಲಕ ಕೇಂದ್ರದ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಿ ಕೊಡಲಾಗಿದೆ. ಈ ಹಿಂದಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕರುಣಾಕರ ಸುವರ್ಣ ಅವರ ಸಮಿತಿಯವರು ಮತ್ತು ಉಪ್ಪಿನಂಗಡಿಯ ಇಂಜಿನಿಯರ್ ಸುಧಾಕರ್ ಶೆಟ್ಟಿಯವರ ಮೂಲಕ ಡಿ.ಪಿ.ಆರ್ ತಯಾರು ಮಾಡಲಾಗಿದ್ದು ಇಂಜಿನಿಯರ್ ಪ್ರಸನ್ನ ದರ್ಬೆಯವರು ಡಿ.ಪಿ.ಆರ್ ತಯಾರಿಕೆಯಲ್ಲಿ ಸಲಹೆಗಳನ್ನು ನೀಡಿ ಅಧಿಕಾರಿಗಳ ಮಟ್ಟದಲ್ಲಿ ಅನುಮೋದನೆಗೊಳಿಸುವಲ್ಲಿ ಕೆಲಸ ಮಾಡಿರುತ್ತಾರೆ. ಇದು ಕಾರ್ಯಗತವಾದರೆ, ಸಂಗಮ ಕ್ಷೇತ್ರ ಉಪ್ಪಿನಂಗಡಿ ಕ್ಷೇತ್ರದ ಬೆಳವಣಿಗೆಗೆ ಮಹತ್ವ ಪೂರ್ಣ ಕೊಡುಗೆಯಾಗುವುದರಲ್ಲಿ ಸಂಶಯವಿಲ್ಲ.