ನವದೆಹಲಿ: ಬಜೆಟ್‌ 2025ರಲ್ಲಿ ವಾರ್ಷಿಕ 12 ಲಕ್ಷದವರೆಗೆ ಆದಾಯ ಹೊಂದಿರುವವರು ತೆರಿಗೆ ಕಟ್ಟುವಂತಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

ಪ್ರತಿ ಬಾರಿ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿತ್ತು. ಹೀಗಾಗಿ ಈ ಬಾರಿ ಗರಿಷ್ಠ 10 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡಬಹುದು ಎಂಬ ಮಾತು ಕೇಳಿ ಬಂದಿತ್ತು. ಆದರೆ ಈ ಬಾರಿ ನಿರ್ಮಲಾ ಸೀತಾರಾಮನ್‌ ಅವರು ಬರೋಬ್ಬರಿ 12 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿ ಮಧ್ಯಮ ವರ್ಗದವರಿಗೆ ಬಂಪರ್‌ ಘೋಷಣೆ ಮಾಡಿದ್ದಾರೆ. ಮುಂದಿನ ವಾರ ಸೀತಾರಾಮನ್‌ ಅವರು ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸಲಿದ್ದಾರೆ. ಈ ಮಸೂದೆಯಲ್ಲಿ ಈ ವಿಚಾರದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.
ಹೊಸ ತೆರಿಗೆ ಪದ್ಧತಿಯಡಿಯಲ್ಲಿ ವಾರ್ಷಿಕ 12 ಲಕ್ಷ ರೂ.ವರೆಗೆ ಆದಾಯ ಗಳಿಸುವವರು ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಇದಕ್ಕೆ 75,000 ರೂ.ಗಳ ಪ್ರಮಾಣಿತ ಕಡಿತವನ್ನು ಸೇರಿಸಿದರೆ, ವಾರ್ಷಿಕ 12.75 ಲಕ್ಷ ರೂ.ವರೆಗಿನ ಆದಾಯ ಹೊಂದಿರುವ ತೆರಿಗೆದಾರರು ತೆರಿಗೆ ಕಟ್ಟುವಂತಿಲ್ಲ.

ಹಿರಿಯ ನಾಗರಿಕರಿಗೆ ಬಡ್ಡಿಯ ಮೇಲಿನ ತೆರಿಗೆ ಕಡಿತದ ಮಿತಿಯನ್ನು 50,000 ರೂ.ನಿಂದ 1,00,000 ರೂ.ಗೆ ಏರಿಕೆ

ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್
2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ, ಔಷಧೀಯ ಕಂಪನಿಗಳು ನಡೆಸುವ ರೋಗಿ ನೆರವು ಕಾರ್ಯಕ್ರಮದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ನೀಡಿದರೆ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ಪಡೆಯಬಹುದು. ಹೆಚ್ಚುವರಿಯಾಗಿ, 37 ಹೊಸ ಔಷಧಿಗಳು ಮತ್ತು 13 ಹೊಸ ರೋಗಿ ನೆರವು ಕಾರ್ಯಕ್ರಮಗಳನ್ನು ವಿನಾಯಿತಿ ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕ್ಯಾನ್ಸರ್ ರೋಗಿಗಳು, ಅಪರೂಪದ ಕಾಯಿಲೆಗಳು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಪರಿಹಾರ ಒದಗಿಸಲು, 36 ಜೀವ ಉಳಿಸುವ ಔಷಧಿಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗುವುದು ಹಾಗೂ 6 ಜೀವ ಉಳಿಸುವ ಔಷಧಿಗಳಿಗೆ ಕಸ್ಟಮ್ಸ್ ಸುಂಕದಲ್ಲಿ 5% ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು.

ರೈತರಿಗಾಗಿ ‘ಧನ್‌ ಧಾನ್ಯ ಕೃಷಿ’ ಯೋಜನೆ ಘೋಷಿಸಿದ ಸೀತಾರಾಮನ್‌

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ, ‘ಧನ್ ಧಾನ್ಯ ಕೃಷಿ’ ಯೋಜನೆಯನ್ನು ಘೋಷಿಸಿದ್ದಾರೆ. ಇದು ದೇಶದ 1 ಕೋಟಿಗೂ ಹೆಚ್ಚು ರೈತರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ. ‘ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ’ಯು ಕಡಿಮೆ ಇಳುವರಿ, ಆಧುನಿಕ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳುತ್ತದೆ ಎಂದು ಹೇಳಿದ್ದಾರೆ.