ಬಂಟ್ವಾಳ ತಾಲೂಕಿನ ಬಾಲ್ತಿಲ ಗ್ರಾಮದ ಕುದ್ರಬೆಟ್ಟು ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ದಕ್ಷಿಣ ಭಾಗದ ಗುಡ್ಡಗಳ ನಡುವೆ ಹಚ್ಚ ಹಸುರಿನ ಮೇರು ವೃಕ್ಷಗಳಿಂದ ನಯನಮನೋಹರ ರಮ್ಯ ಪರಿಸರದ ನಡುವೆ ಕಂಗೊಳಿಸುತ್ತಿರುವ ಊರಿನ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಶ್ರದ್ಧಾ ಭಕ್ತಿಯ ಕೇಂದ್ರ ಶ್ರೀ ಮಣಿಕಂಠ ಮಂದಿರದ ವಠಾರದಲ್ಲಿರುವ ಸಾನಿಧ್ಯವೇ “ಶ್ರೀ ಕಲ್ಲುರ್ಟಿ ದೈವಸ್ಥಾನ ಕುದ್ರೆಬೆಟ್ಟು “.
ಯಾವುದೇ ಜಾತಿ ಮತ ಭೇದವಿಲ್ಲದೆ ಶ್ರದ್ಧಾ ಭಕ್ತಿಯಿಂದ ತಾಯಿ ಕಲ್ಲುರ್ಟಿಯಲ್ಲಿ ಪ್ರಾರ್ಥಿಸಿದರೆ ಭಕ್ತರ ಅಭಿಷ್ಟೇ ಇಷ್ಟಾರ್ಥಗಳು ಕ್ಷಣಮಾತ್ರದಲ್ಲಿ ಈಡೇರುವ ಈ ಸಾನಿಧ್ಯದಲ್ಲಿ ದಿನೇ ದಿನೇ ಹರಕೆ ಸೇವೆಗಳು, ಅಗೆಲು ಸೇವೆಗಳ ಸಂಖ್ಯೆ ಗಣನೀಯ ಏರುತಿದೆ. ಸುಮಾರು 15 ವರ್ಷಗಳ ಹಿಂದೆ ಈ ಸಾನಿಧ್ಯದ ಪ್ರತಿಷ್ಟ ಕಾರ್ಯಗಲು ನಡೆದಿದ್ದು, ಶಿಥಿಲ ಅವಸ್ಥೆಯಲ್ಲಿರುವ ಈ ಸಾನಿಧ್ಯವನ್ನು ಊರ ಪರ ಊರ ಭಗವತ್ ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರ ಮಾಡಲು
ನಿರ್ಧರಿಸಿದ್ದು, ಆ ಪ್ರಕಾರ ಜನಶಕ್ತಿ ಸೇವಾ ಟ್ರಸ್ಟ್ (ರಿ )ಕುದ್ರೆಬೆಟ್ಟು, ಶ್ರೀ ಮಣಿಕಂಠ ಯುವಶಕ್ತಿ( ರಿ) ಕುದ್ರೆಬೆಟ್ಟು, ಶ್ರೀ ಮಣಿಕಂಠ ಮಾತೃಶಕ್ತಿ ಕುದ್ರೆಬೆಟ್ಟು ಜವಾಬ್ದಾರಿಯನ್ನು ವಹಿಸಿಕೊಂಡು ಇದೀಗ ಕೇವಲ ಒಂದೇ ತಿಂಗಳ ಅವಧಿಯಲ್ಲಿ ನೂತನ ಸಾನಿಧ್ಯ ನಿರ್ಮಿಸಲಾಗಿದ್ದು ಅದರ ಪುನಃ ಪ್ರತಿಷ್ಠಾ ಮಹೋತ್ಸವ
ಇವತ್ತು ಬೆಳಿಗ್ಗೆ ಗಣಹೋಮ ಬಳಿಕ 10.00 ರಿಂದ 10.25ರ ಒಳಗೆ ಒದಗುವ ಮಿಥುನ ಲಗ್ನದ ಸುಮೂಹೂರ್ತದಲ್ಲಿ ಶ್ರೀ ಸೂರ್ಯನಾರಾಯಣ ಭಟ್ ಕಶೆಕೋಡಿ ಇವರ ವೈದಿಕತ್ವದಲ್ಲಿ ಶ್ರೀ ಕಲ್ಲುರ್ಟಿ ದೈವದ ಪ್ರತಿಷ್ಠೆ, ಸಾನಿಧ್ಯ ನವಕ ಕಲಶಾಭಿಷೇಕ, ಪರ್ವ ಸೇವೆ ನಡೆಯಿತು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ ನಡೆದು, ರಾತ್ರಿ ಶ್ರೀ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ಕೋಲ ನಡೆಯಲಿದೆ. ಯಾವುದೇ ತರಹದ ಸಭಾ ಕಾರ್ಯಕ್ರಮವನ್ನು ಮಾಡದೆ ಧಾರ್ಮಿಕ ಕಾರ್ಯಕ್ರಮಕ್ಕೆ ಒತ್ತು ನೀಡಲಾಗಿದೆ.
ಈ ಸಂದರ್ಭದಲ್ಲಿ ಜನಶಕ್ತಿ ಸೇವಾ ಟ್ರಸ್ಟ್ (ರಿ )ಕುದ್ರೆಬೆಟ್ಟು, ಶ್ರೀ ಮಣಿಕಂಠ ಯುವಶಕ್ತಿ( ರಿ) ಕುದ್ರೆಬೆಟ್ಟು, ಶ್ರೀ ಮಣಿಕಂಠ ಮಾತೃಶಕ್ತಿ ಕುದ್ರೆಬೆಟ್ಟು ಇದರ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸರ್ವ ಸದಸ್ಯರಗಳು, ಊರಿನ ಪರ ಊರಿನ ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು. .