ಪ್ರಸಕ್ತ ಸಾಲಿನ ಹಿಂಗಾರು ಅವಧಿಯಲ್ಲಿ ಉಂಟಾದ ಮಳೆಹಾನಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿ, ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಸಿ.ಎಂ.ಸಿದ್ಧರಾಮಯ್ಯ ಮಾತನಾಡಿದರು

ಸುದ್ದಿಗೋಷ್ಠಿಯ ಮುಖ್ಯಾಂಶಗಳು
* ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್‌ 1ರಿಂದ 25ರ ವರೆಗೆ ರಾಜ್ಯದಲ್ಲಿ ಸರಾಸರಿ 181 ಮಿ.ಮೀ ಮಳೆಯಾಗಿದೆ. ಈ ಅವಧಿಯ ವಾಸ್ತವಿಕ ಸರಾಸರಿ ಮಳೆ ಪ್ರಮಾಣ 114 ಮಿ.ಮೀ ಆಗಿದ್ದು, ಶೇ.58 ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ.
* ಮುಂಗಾರು ಅವಧಿಯಲ್ಲಿ ಅಂದರೆ ಜೂನ್‌ 1ರಿಂದ ಸೆಪ್ಟಂಬರ್‌ 30ರ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಮಳೆ 852 ಮಿ.ಮೀ ಆಗಿದ್ದು, ಈ ಬಾರಿ 978 ಮಿ.ಮೀ ಮಳೆ ದಾಖಲಾಗಿದೆ. ಮುಂಗಾರು ಅವಧಿಯಲ್ಲೂ ಶೇ.15ರಷ್ಟು ಹೆಚ್ಚುವರಿ ಮಳೆಯಾಗಿತ್ತು.
* ಹಿಂಗಾರು ಅವಧಿಯಲ್ಲಿ ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್‌ ತಿಂಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಈಗಾಗಲೇ ಮುನ್ಸೂಚನೆ ನೀಡಲಾಗಿದೆ.
*ರಾಜ್ಯದ ಪ್ರಮುಖ ಜಲಾಶಯಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯ 895.62 ಟಿಎಂಸಿ ಆಗಿದ್ದು, ಪ್ರಸ್ತುತ 871.26 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 505.81 ಟಿಎಂಸಿ ಇತ್ತು.
* ಹಿಂಗಾರು ಅವಧಿಯಲ್ಲಿ ಅತಿವೃಷ್ಟಿಯಿಂದಾಗಿ ಒಟ್ಟು 25 ಸಾವು ಸಂಭವಿಸಿದ್ದು, ತುರ್ತು ಪರಿಹಾರ ಪಾವತಿಸಲಾಗಿದೆ. ಮಳೆಯಿಂದಾಗಿ 84 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 2,077ಮನೆಗಳು ಭಾಗಶಃ ಹಾನಿಗೀಡಾಗಿವೆ. ಪೂರ್ತಿ ಮನೆಗೆ 1.20ಲಕ್ಷ ರೂ ಪರಿಹಾರ ಹಾಗೂ ಮನೆ ನಿರ್ಮಿಸಿ ಕೊಡಲು ಈಗಾಗಲೇ ಆದೇಶಿಸಲಾಗಿದೆ. ಭಾಗಶಃ ಹಾನಿಗೀಡಾದ ಮನೆಗಳಿಗೆ ಮುಂಗಾರು ಹಂಗಾಮಿನಲ್ಲಿ ಸೂಚಿಸಿರುವಂತೆ ರೂ.50 ಸಾವಿರದವರೆಗೆ ಪರಿಹಾರ ಒದಗಿಸಲು ಆದೇಶಿಸಲಾಗಿದೆ.
* ಬೆಳೆ ಹಾನಿ ಕುರಿತು ಸ್ಥಳ ಪರಿಶೀಲನೆ ನಡೆಸಿದ ಆಧಾರದಲ್ಲಿ ಪ್ರಾಥಮಿಕ ವರದಿಯನ್ನು ಪಡೆಯಲಾಗಿದೆ. ಅತಿವೃಷ್ಟಿಯಿಂದಾಗಿ ಒಟ್ಟು 74,993 ಹೆಕ್ಟೇರ್‌ ಪ್ರದೇಶದಲ್ಲಿ ಅಂದಾಜು ಕೃಷಿ ಬೆಳೆ ಹಾನಿ, 30,941 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಹಾನಿ ಅಂದಾಜಿಸಲಾಗಿದೆ. ಒಟ್ಟು 1,05,937 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಅಂದಾಜಿಸಲಾಗಿದೆ.