ಬಂಟ್ವಾಳ, ಆ 28: ಬಿ. ಸಿ. ರೋಡ್ ರಂಗೋಲಿ ಸಭಾಂಗಣದಲ್ಲಿ ಆ. 28 ರಂದು ಬೊಲ್ಪು ರೈತ ಉತ್ಪಾದಕರ ಸಂಸ್ಥೆ ಜೋಡುಮಾರ್ಗ ಇದರ ವಾರ್ಷಿಕ ಮಹಾಸಭೆಯನ್ನು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಸುರೇಶ್ ಬಲ್ನಾಡು ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಕಾಳುಮೆಣಸು ಬೆಳೆ ಮತ್ತು ನೀರು ಗೊಬ್ಬರ ನಿರ್ವಹಣೆ ಕುರಿತು ಸಂವಹನ ನಡೆಸಿದರು.

ಬಂಟ್ವಾಳ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್. ಮಾತನಾಡಿ ಆಹಾರ ಬೆಳೆಯಾದ ಭತ್ತದ ಕೃಷಿಗೆ ಇಲಾಖೆ ಆದ್ಯತೆ ನೀಡುವುದು. ಹಡಿಲು ಗದ್ದೆ ಭತ್ತದ ಬೆಳೆ ಬೆಳೆಯಲು ಪ್ರೋತ್ಸಾಹ ನೀಡುತ್ತಿದೆ. ಬೆಳೆ ಕಟಾವು ಯಂತ್ರವನ್ನು ಎಫ್ ಪಿಒ ಬಯಸಿದರೆ ಆದ್ಯತೆಯಲ್ಲಿ ನೀಡುವುದಾಗಿ ತಿಳಿಸಿದರು.

ಬೊಲ್ಪು ಸಂಸ್ಥೆ ಕೃಷಿ ಇಲಾಖೆಯಿಂದ ನಿರ್ದಿಷ್ಟ ಪ್ರದೇಶದ ರೈತರ ಪ್ರಯೋಜನಕ್ಕಾಗಿ ನೋಂದಾಯಿತವಾಗಿದೆ. ಅದಕ್ಕೆ ಇಲಾಖೆಯಿಂದ ವಿವಿಧ ಸವಲತ್ತು ಒದಗಿಸಿದೆ ಎಂದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೊ ಪ್ರದೀಪ್ ಡಿಸೋಜ ಇಲಾಖೆಯಲ್ಲಿ ರೈತರಿಗೆ ಸಿಗುವ ಸವಲತ್ತುಗಳ ಮಾಹಿತಿ ನೀಡಿದರು. ಕಾಳುಮೆಣಸು ಜೈವಿಕ ಗೊಬ್ಬರ ಪೆಪ್ಪರ್ ಸ್ಪೆಷಲ್ ಅದನ್ನು ಕೃಷಿಕರಿಗೆ ಉಚಿತ ವಿತರಿಸಿದರು.

ಬೊಲ್ಪು ಎಫ್ ಪಿಒ ಅಧ್ಯಕ್ಷ ರಾಜ್ ಬಂಟ್ವಾಳ್ ಸಭಾಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆರಂಭ, ಪ್ರಗತಿ ಬಗ್ಗೆ ಮಾಹಿತಿ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಸದಾನಂದ ಡಿ. ಶೆಟ್ಟಿ, ನಿರ್ದೇಶಕರಾದ ದೇವಪ್ಪ ಕುಲಾಲ್ ಪಂಜಿಕಲ್ಲು, ಜಗದೀಶ ಭಂಡಾರಿ ಕುರಿಯಾಳ, ಸೀತಾರಾಮ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರ್ದೇಶಕರಾದ ಜಗನ್ನಾಥ ಚೌಟ ಬದಿಗುಡ್ಡೆ ಸ್ವಾಗತಿಸಿ, ಅರ್ವಿನ್ ಡಿಸೋಜ ಲೊರೆಟ್ಟೊ ಮಹಾಸಭೆಯ ನೋಟಿಸು ವಾಚಿಸಿದರು. ಹರ್ಷಿತ್ ಲೆಕ್ಕಪತ್ರ ಮಂಡಿಸಿದರು. ವಿಜಯ ರೈ ವಾಮದಪದವು ವಂದಿಸಿದರು. ಕೃಷ್ಣಪ್ಪ ಸಪಲ್ಯ ಅಂತರ ಕಾರ್ಯಕ್ರಮ ನಿರೂಪಿಸಿದರು.