ಚುನಾವಣೆ ಸಂದರ್ಭದಲ್ಲಿ ನೀವು ನಿಮ್ಮ ಜವಾಬ್ದಾರಿಯನ್ನು ನೆನಪಿಟ್ಟುಕೊಂಡು ಮತ ನೀಡಿದ್ದೀರಿ. ಅದೇ ರೀತಿ ನಾನು ನನ್ನ ಜವಾಬ್ದಾರಿಯನ್ನು ಅರಿತು ಕ್ಷೇತ್ರದ ಕೆಲಸ ಮಾಡುತ್ತಾ ಬಂದಿದ್ದೇನೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಹೇಳಿದರು.
ಅವರು ಡಿ.31ರಂದು ಸುರತ್ಕಲ್ ಸುಭಾಷಿತ ನಗರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಫುಟ್ ಪಾತ್, ಚರಂಡಿ, ರಸ್ತೆ ಹಂಪ್ಸ್ ಮತ್ತಿತರ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಮಾತನಾಡಿದರು. ಮೊದಲ ಅವಧಿಯಲ್ಲಿ ಶಕ್ತಿ ಮೀರಿ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಎರಡನೇ ಅವಧಿಯಲ್ಲಿ ಸರಕಾರದಲ್ಲಿ ಅನುದಾನ ಕೊರತೆ ಇರುವ ಕಾರಣ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಆದರೂ ಸುರತ್ಕಲ್ ಭಾಗದಲ್ಲಿ ಅಭೂತಪೂರ್ವವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಆತ್ಮತೃಪ್ತಿ ಇದೆ. ಇದು ನಿಮ್ಮೆಲ್ಲರ ಸಹಕಾರದಿಂದ ಆಗಿದೆ ಎಂದರು.
ಮೇಯರ್ ಸುಧೀರ್ ಶೆಟ್ಟಿ ಮಾತಾಡಿ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಷನ್ ಇಡೀ ಊರಿನ ಅಭಿವೃದ್ಧಿಯ ದೃಷ್ಟಿಯಿಂದ ಶ್ಲಾಘನೀಯ ಕಾರ್ಯ ಮಾಡಿದೆ. ಇದು ಎಲ್ಲರಿಗೂ ಮಾದರಿ. ಮಂಗಳೂರು ಮಹಾನಗರ ಪಾಲಿಕೆ ಇಬ್ಬರು ಶಾಸಕರ ನಿಸ್ವಾರ್ಥ ಸೇವೆಯಿಂದ ಜನಾನುರಾಗಿ ಕೆಲಸ ಮಾಡುತ್ತಿದೆ. ಸರಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೊಂಡಿಯಾಗಿ ಇಲ್ಲಿನ ಸಂಘಟನೆ ಪ್ರಾಮಾಣಿಕ ಕೆಲಸವನ್ನು ಮಾಡಿದೆ. ಅದಕ್ಕಾಗಿ ಅಭಿನಂದನೆಗಳು ಎಂದರು.
ಸಮಾರಂಭದಲ್ಲಿ ಶಾಸಕ ಡಾ. ವೈ. ಭರತ್ ಶೆಟ್ಟಿ ಮತ್ತು ಗುತ್ತಿಗೆದಾರ ಸುಧಾಕರ ಎಸ್. ಪೂಂಜ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತೆರಿಗೆ ಹಣಕಾಸು ನಿರ್ವಹಣೆ ಮತ್ತು ಅಫೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್ ಚೌಟ, ಉಪಮೇಯರ್ ಸುನೀತಾ, ಕಾರ್ಪೋರೇಟರ್ ಗಳಾದ ನಯನ ಕೋಟ್ಯಾನ್, ಸರಿತಾ ಶಶಿಧರ್, ಶೋಭಾ ರಾಜೇಶ್, ಗುತ್ತಿಗೆದಾರ ಸುಧಾಕರ್ ಎಸ್. ಪೂಂಜಾ, ಬಂಟರ ಸಂಘ ಸುರತ್ಕಲ್ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಅಸೋಸಿಯೇಶನ್ ನ ಉಪಾದ್ಯಕ್ಷ ತಾರಾನಾಥ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ನರಸಿಂಹ ಸುವರ್ಣ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಪಿಡಬ್ಲ್ಯೂಡಿ ಇಂಜಿನಿಯರ್ ವಸಂತ್ ರಾಜ್ ಉಪಸ್ಥಿತರಿದ್ದರು.
ಪುಷ್ಪರಾಜ್ ಶೆಟ್ಟಿ ಕುಡುಂಬೂರು ಪ್ರಾಸ್ತಾವಿಕ ಮಾತನಾಡಿದರು. ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಸ್ವಾಗತಿಸಿ, ವಂದಿಸಿದರು. ರಾಜೇಶ್ವರಿ ಡಿ. ಶೆಟ್ಟಿ ಮತ್ತು ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಭಾಷಿತನಗರ ಅಸೋಸಿಯೇಶನ್ ನಿಂದ ಸ್ನೇಹ ಸಮ್ಮಿಲನ, ಸಾಧಕರಿಗೆ ಗೌರವ, ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮ ನಡೆಯಿತು.