ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಕಲರ್ ಫುಲ್ ಜಾಹೀರಾತುಗಳು ಯುವಮನಸ್ಸುಗಳನ್ನು ಸುಲಭವಾಗಿ ಸೆಳೆಯುತ್ತವೆ. ಕೇರಳದ ಮಲಪ್ಪುರಂನಲ್ಲಿ ಇನ್ಸ್ಟಾಗ್ರಾಂ ಇನ್ಫ್ಲುಯೆನ್ಸರ್ಗಳ ಪ್ರಚಾರ ನೋಡಿ ಫೇರ್ನೆಸ್ ಕ್ರೀಮ್ ಬಳಸಿದ 17 ವರ್ಷದ ಬಾಲಕಿ ಗಂಭೀರ ಕಿಡ್ನಿ ಕಾಯಿಲೆಗೆ ತುತ್ತಾಗಿರುವ ಘಟನೆ ಆತಂಕ ಮೂಡಿಸಿದೆ. ಮೊಡವೆ, ಕಪ್ಪು ಕಲೆ ಮತ್ತು ಪಿಗ್ಮೆಂಟೇಷನ್ ಮಾಯವಾಗುತ್ತದೆ ಎಂಬ ಜಾಹೀರಾತು ನಂಬಿ ಸುಮಾರು ಒಂದು ವರ್ಷ ಕ್ರೀಮ್ ಹಚ್ಚಿದ್ದ ಮಂಗಳೂರಿನ ಬಾಲಕಿಯ ದೇಹದಲ್ಲೂ ಅಪಾಯಕಾರಿ ಪ್ರಮಾಣದ ಪಾದರಸ ಪತ್ತೆಯಾಗಿದೆ.
ಪರೀಕ್ಷೆಗೆ ಒಳಪಡಿಸಿದ ಕ್ರೀಮ್ನಲ್ಲಿ ಬರೋಬ್ಬರಿ 12,500 PPM ಪಾದರಸ ಅಂಶ ಇರುವುದು ಬಯಲಾಗಿದೆ. ಸೌಂದರ್ಯವರ್ಧಕಗಳಲ್ಲಿ ಪಾದರಸದ ಸುರಕ್ಷಿತ ಮಿತಿ 1 PPMಗಿಂತ ಕಡಿಮೆ ಇರಬೇಕು. ನಿಯಮಕ್ಕಿಂತ ಸಾವಿರಾರು ಪಟ್ಟು ಹೆಚ್ಚಿರುವ ಈ ವಿಷಕಾರಿ ಲೋಹವು ಮೂತ್ರಪಿಂಡದ ಶೋಧಕ ಭಾಗಗಳಿಗೆ ಹಾನಿ ಮಾಡಿ ‘ಮೆಂಬ್ರೇನಸ್ ನೆಫ್ರೋಪತಿ’ ಎಂಬ ಗಂಭೀರ ಕಾಯಿಲೆಗೆ ದೂಡಿದೆ. ಕಾಲುಗಳಲ್ಲಿ ಊತ, ರಕ್ತದೊತ್ತಡದಲ್ಲಿ ಏರುಪೇರು ಮತ್ತು ಪ್ರಜ್ಞೆ ತಪ್ಪುವ ಲಕ್ಷಣಗಳು ಕಾಣಿಸಿಕೊಂಡಿದ್ದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿವೆ.
ಈ ಘಟನೆಯ ಬೆನ್ನಲ್ಲೇ ಕೇರಳ ಸರ್ಕಾರ ತನಿಖೆಗೆ ಸೂಚನೆ ನೀಡಿದ್ದು, ಮಕ್ಕಳ ಹಕ್ಕುಗಳ ಆಯೋಗವೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಕ್ರೀಮ್ನ ಗುಣಮಟ್ಟ, ಅಡಗಿರುವ ರಾಸಾಯನಿಕಗಳು ಮತ್ತು ಸುಳ್ಳು ಭರವಸೆ ನೀಡುವ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮದ ನಿರೀಕ್ಷೆ ಮೂಡಿದೆ.
ಸೆಲೆಬ್ರಿಟಿ ಅಥವಾ ಇನ್ಫ್ಲುಯೆನ್ಸರ್ ಪ್ರಚಾರ ನೋಡಿ ಯಾವುದೇ ಉತ್ಪನ್ನವನ್ನು ಕುರುಡಾಗಿ ನಂಬಬೇಡಿ. ಕಡಿಮೆ ಅವಧಿಯಲ್ಲಿ ಬಣ್ಣ ಬದಲಾಯಿಸುವುದಾಗಿ ಹೇಳುವ ಕ್ರೀಮ್ಗಳಿಂದ ದೂರವಿರಿ. ಖರೀದಿಸುವ ಮುನ್ನ ಲೇಬಲ್, ತಯಾರಕರ ವಿವರ, ಪದಾರ್ಥಗಳ ಪಟ್ಟಿ, ಪರವಾನಗಿ ಸಂಖ್ಯೆ ಮತ್ತು ಅವಧಿ ಮುಗಿಯುವ ದಿನಾಂಕವನ್ನು ಕಡ್ಡಾಯವಾಗಿ ಗಮನಿಸಿ. ಅಂದಕ್ಕಿಂತ ಆರೋಗ್ಯವೇ ಅಮೂಲ್ಯ.
