ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತು ದೇಶದಲ್ಲಿಯೇ ಅತ್ಯಂತ ವ್ಯವಸ್ಥಿತವಾಗಿ ರಚನೆಯಾದ ಸಂಸ್ಥೆಯಾಗಿದ್ದು, ಕನ್ನಡ ಭಾಷೆ, ಸಾಹಿತ್ಯದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಳ್ಳುವುದರ ಮೂಲಕ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಬೇಕೆಂದು ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಂ.ಪಿ ಶ್ರೀನಾಥ ಕರೆನೀಡಿದರು.  ಇದನ್ನೂ ಓದಿ : ತಿಗಳರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಯ್ಕೆಯಾದ ಎಲ್.ಎ. ಮಂಜುನಾಥ್ ಅವರಿಗೆ ಆದೇಶಪತ್ರ ಹಸ್ತಾಂತರ
ಅವರು  ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಹಾಗೂ ಶ್ರೀ ವೆಂಕಟರಮಣಸ್ವಾಮೀ ಮಹಾವಿದ್ಯಾಲಯ, ಬಂಟ್ವಾಳ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶ್ರೀ ಮಹಾಬಲೇಶ್ವರ ಹೆಬ್ಬಾರ್‌ರವರು ಭಾಷೆ ಇತಿಹಾಸವನ್ನು ಕೊಂಡೊಯ್ಯುವ ಪ್ರವಾಹವಿದ್ದಂತೆ ಎನ್ನುತ್ತಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣರಾದ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಸರ್ ಮಿರ್ಜಾ ಇಸ್ಮಾಯಿಲ್‌ರವರ ಕೊಡುಗೆಗಳನ್ನು ತಿಳಿಸಿದರು.
ಎಸ್.ವಿ.ಎಸ್.ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಡಿ.ಮಂಚಿಯವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆಯ ಉಳಿವು ಹಾಗೂ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಈ ಸಂಸ್ಥೆಯು ಯಾವುದೇ ಪ್ರಚಾರ ಬಯಸದೇ ಸಾಹಿತ್ಯ ಪ್ರಚಾರಕ್ಕೆ ಅವಿರತ ಶ್ರಮಿಸುತ್ತಿದೆ ಎಂದು ನುಡಿದರು.
ವೇದಿಕೆಯಲ್ಲಿ ಶ್ರೀ ವಿಶ್ವನಾಥ ಬಂಟ್ವಾಳ, ಅಧ್ಯಕ್ಷರು, ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಪೂವಪ್ಪ ನೇರಳೆಕಟ್ಟೆ, ಕಾರ್ಯಕಾರಿ ಸದಸ್ಯರು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶಿವಣ್ಣಪ್ರಭು ಸ್ವಾಗತಿಸಿ, ರಸಾಯನ ಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ.ಸುಯೋಗವರ್ಧನ್ ಡಿ.ಎಮ್. ವಂದಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಕಾಶೀನಾಥ ಶಾಸ್ತಿç ಹೆಚ್.ವಿ. ನಿರೂಪಿಸಿದರು. ವಿದ್ಯಾರ್ಥಿನಿಯರಾದ ವಂದಿತಾ ಮತ್ತು ಪನ್ನಗಶ್ರೀ ನಾಡಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿ ಸದಸ್ಯರು ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.