ಆರೋಗ್ಯಕರ ಜೀರ್ಣಕ್ರಿಯೆಗೆ ಪೌಷ್ಟಿಕ ಆಹಾರದಷ್ಟೇ ಪ್ರಶಾಂತ ಮನಸ್ಸು ಕೂಡ ಅಗತ್ಯ. ನಾವು ಕೋಪ, ದುಃಖ ಅಥವಾ ಒತ್ತಡದಲ್ಲಿದ್ದಾಗ ಸೇವಿಸುವ ಆಹಾರ ದೇಹಕ್ಕೆ ಸರಿಯಾಗಿ ಪೋಷಣೆ ನೀಡುವುದಿಲ್ಲ. ಆದ್ದರಿಂದ, ಎಷ್ಟೇ ಸಮತೋಲಿತ ಆಹಾರವಾದರೂ ಮನಸ್ಸು ನೊಂದಾಗ ಸೇವಿಸುವ ಬದಲು, ಸಮಾಧಾನಗೊಂಡ ನಂತರ ನೆಮ್ಮದಿಯಿಂದ ಸೇವಿಸುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮ.

ಆರೋಗ್ಯಕರ ಜೀವನಶೈಲಿಗೆ ನಾವು ಏನು ತಿನ್ನುತ್ತೇವೆ ಎನ್ನುವುದು ಎಷ್ಟು ಮುಖ್ಯವೋ, ಹೇಗೆ ಮತ್ತು ಯಾವಾಗ ತಿನ್ನುತ್ತೇವೆ ಎನ್ನುವುದು ಅಷ್ಟೇ ಮುಖ್ಯ. ಜೀರ್ಣಕ್ರಿಯೆ ಸರಿಯಾಗಿ ಆಗಬೇಕಾದರೆ ರಾತ್ರಿಯ ಊಟ ಮಿತವಾಗಿರಲಿ. ಮಲಗುವ 3 ಗಂಟೆ ಮುನ್ನವೇ ಊಟ ಮುಗಿಸಿ ಹಾಗು ಊಟವಾದ ಮೇಲೆ ಸ್ವಲ್ಪ ದೂರ ಅಡ್ಡಾಡಿ. ಎಡಮಗ್ಗುಲಲ್ಲಿ ಮಲಗುವ ಅಭ್ಯಾಸ ಬೆಳೆಸಿಕೊಳ್ಳಿ.

ವಯಸ್ಸಾಗುತ್ತಿದ್ದಂತೆ ದೇಹದಲ್ಲಿ ‘ವಾತ ದೋಷ’ ಹೆಚ್ಚಾಗುವುದು ನೈಸರ್ಗಿಕ. ಇದು ಕೇವಲ ಕೀಲುನೋವು ಮಾತ್ರವಲ್ಲದೆ, ಚರ್ಮದ ಅತಿಯಾದ ಶುಷ್ಕತೆಗೂ ಕಾರಣವಾಗುತ್ತದೆ. ಇದಕ್ಕಾಗಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಕೀಲುಗಳಿಗೆ ಎಳ್ಳೆಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಇದು ವಾತ ದೋಷವನ್ನು ಸಮತೋಲನಗೊಳಿಸುತ್ತದೆ ಹಾಗೂ ಕೀಲುಗಳ ನೋವು ಮತ್ತು ಬಿಗಿತವನ್ನು ಕಡಿಮೆ ಮಾಡುತ್ತದೆ.

ಯುವಜನತೆಯಲ್ಲಿ ಜೀರ್ಣಾಗ್ನಿ ಮತ್ತು ಪಿತ್ತದ ಪ್ರಭಾವ ಹೆಚ್ಚಿರುವುದರಿಂದ, ಮಧ್ಯಾಹ್ನದ ಉರಿ ಬಿಸಿಲಿಗೆ ಬೇಗನೆ ಸುಸ್ತಾಗುವುದು ಸಹಜ. ಈ ಸುಸ್ತನ್ನು ಕಡಿಮೆ ಮಾಡಿ ದೇಹವನ್ನು ತಂಪಾಗಿಸಲು ಮಜ್ಜಿಗೆ, ಎಳನೀರು, ಕೊತ್ತಂಬರಿ ನೀರನ್ನು ಕುಡಿಯಿರಿ. ಇವುಗಳು ನಿಮ್ಮ ದೇಹದ ಉಷ್ಣತೆ ಹಾಗೂ ಪಿತ್ತವನ್ನು ಶಮನಗೊಳಿಸಿ ದೇಹಕ್ಕೆ ಆರಾಮ ನೀಡುತ್ತದೆ.

ಮಹಿಳೆಯರ ಆರೋಗ್ಯವೇ ಸಮಾಜದ ಶಕ್ತಿ. ಹಾರ್ಮೋನ್ ಸಮತೋಲನಕ್ಕಾಗಿ ಶತಾವರಿ, ಅಶೋಕ ಮತ್ತು ಲೋಳೆಸರದಂತಹ ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಿ. ರಕ್ತಹೀನತೆಯಿಂದ ದೂರವಿರಲು ನಿಮ್ಮ ಆಹಾರದಲ್ಲಿ ನುಗ್ಗೆಸೊಪ್ಪು ಮತ್ತು ನೆಲ್ಲಿಕಾಯಿಯನ್ನು ಮರೆಯದೆ ಸೇರಿಸಿಕೊಳ್ಳಿ. ಪ್ರಕೃತಿ ದತ್ತವಾದ ಔಷಧಿಯುಕ್ತ ಆಹಾರಗಳೊಂದಿಗೆ ಸದಾ ಆರೋಗ್ಯವಾಗಿರಿ.
(ಪ್ರರಟನೆ : ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಯುಷ್ ಚಿಕಿತ್ಸಾಲಯ/ಆಸ್ಪತ್ರೆಗೆ ಭೇಟಿ ನೀಡಿ)
