ಚಾಲುಕ್ಯರು ನಿರ್ಮಿಸಿದ ದೇಗುಲಗಳ ವಾಸ್ತುಶಿಲ್ಪದ ಮಹತ್ವ ಅರಿಯುವ ಉದ್ದೇಶವನ್ನು ಚಾಲುಕ್ಯ ಉತ್ಸವ ಹೊಂದಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳ ವೈಭವವನ್ನು ವೀಕ್ಷಿಸಲು ದೇಶವಿದೇಶಗಳಿಂದ ಜನರು ಬರುತ್ತಾರೆ. ಚಾಲುಕ್ಯರ ಆಡಳಿತ ವೈಖರಿಯಂತೆ ನಮ್ಮ ಸರ್ಕಾರವೂ ಸರ್ವಧರ್ಮಗಳ ಸಮನ್ವಯತೆಯನ್ನು ಪಾಲಿಸುತ್ತದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದರು.
ಇದನ್ನೂ ಓದಿ :“ದಕ್ಷಿಣ ಭಾರತ ಸಮಾಜವಾದಿಗಳ ಸಮ್ಮೇಳನ”ವನ್ನು ಉದ್ಘಾಟಿಸಿದ – ಸಿ.ಎಂ.ಸಿದ್ದರಾಮಯ್ಯ
ಬಾದಾಮಿಯ ಇಮ್ಮಡಿ ಪುಲಿಕೇಶಿ ವೇದಿಕೆಯಲ್ಲಿ ಇಂದು ಸಂಜೆ ಆಯೋಜಿಸಿದ್ದ “ಚಾಲುಕ್ಯ ಉತ್ಸವ -2026” ರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೋಂಡು ಮಾತನಾಡಿದರು.
ನಾನು ಮುಖ್ಯಮಂತ್ರಿಯಾಗಿ ಈ ಎರಡು ವರ್ಷದಲ್ಲಿ ಬಾದಾಮಿ ಕ್ಷೇತ್ರಕ್ಕೆ ಸುಮಾರು 2 ಸಾವಿರ ಕೋಟಿ ರೂ.ಗಳ ಅನುದಾನವನ್ನು ನೀಡಿದ್ದೇನೆ. ಕ್ಷೇತ್ರದಲ್ಲಿ 1,400 ಕೋಟಿ ರೂ.ಗಳ ಏತನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೇ 400 ಕೋಟಿ ರೂ.ಗಳಲ್ಲಿ ಬಾದಾಮಿಗೆ ಕುಡಿಯುವ ನೀರಿನ ಯೋಜನೆ, 50 ಕೋಟಿ ರೂ.ಗಳಲ್ಲಿ ರಸ್ತೆ ಯೋಜನೆ ಸೇರಿದಂತೆ ಹಲವು ಅಭಿವೃದ್ದಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂದರು.
ಬಾದಾಮಿ ಶಾಸಕನಾಗಿದ್ದ ಸಂದರ್ಭದಲ್ಲಿ ಚಾಲುಕ್ಯ ಉತ್ಸವ ನಡೆಯಲಿಲ್ಲ ಹಾಗೂ ಇಮ್ಮಡಿ ಪುಲಕೇಶಿ ಪ್ರತಿಮೆ ಸ್ಥಾಪನೆಯಾಗಲಿಲ್ಲ ಎನ್ನುವುದು ನೋವಿನ ಸಂಗತಿ. ಇಂದು ಭೀಮಸೇನಾ ಚಿಮ್ಮನಕಟ್ಟಿಯವರ ಒತ್ತಾಸೆಯಿಂದ ಪ್ರತಿಮೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು
ಈ ಸಂದರ್ಭದಲ್ಲಿ ಸಚಿವರಾದ ಬೈರತಿ ಸುರೇಶ್, ಆರ್.ಬಿ.ತಿಮ್ಮಾಪುರ, ಶಾಸಕರಾದ ಭೀಮಸೇನ್ ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.