ಭಾರತದ ಪ್ರವಾಸದಲ್ಲಿರುವ ಜಾಗತಿಕ ಫುಟ್ಬಾಲ್ ತಾರೆ ಲಯೋನೆಲ್ ಮೆಸ್ಸಿ ಅವರು ಅನಂತ್‌ ಅಂಬಾನಿ ಅವರು ಆರಂಭಿಸಿರುವ ಗುಜರಾತ್‌ನ ವಂತಾರಕ್ಕೆ ಭೇಟಿ ನೀಡಿದರು. ವಂತಾರಾ ಅನಂತ್ ಅಂಬಾನಿ ಅವರು ಆರಂಭಿಸಿದ ವನ್ಯಜೀವಿಗಳ ಪುನರ್ವಸತಿ ಹಾಗೂ ಸಂರಕ್ಷಣಾ ತಾಣಕ್ಕೆ ಲಯೋನೆಲ್ ಮೆಸ್ಸಿ ಅವರ ಈ ಭೇಟಿ ಗಮನ ಸೆಳೆಯಿತು.. ವಂತಾರದಲ್ಲಿ ಪ್ರಾಣಿಗಳ ಆರೈಕೆ ಮಾಡುವವರು, ಸಂರಕ್ಷಣಾ ತಂಡದ ಜೊತೆಗೆ ಮಾತುಕತೆ ನಡೆಸಿ ವನ್ಯಪ್ರಾಣಿಗಳನ್ನು ವೀಕ್ಷಿಸಿದರು.

ತಮ್ಮ ವಿನಯವಂತಿಕೆ ಹಾಗೂ ಮಾನವೀಯ ಮೌಲ್ಯಗಳಿಗೆ ಬಹಳ ಹೆಸರುವಾಸಿಯಾಗಿರುವ ಮೆಸ್ಸಿ ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ಅನಂತ್ ಅಂಬಾನಿ ಅವರ ಬದ್ಧತೆಯನ್ನು ಶ್ಲಾಘಿಸಿದರು.ಈ ಸಂದರ್ಭದಲ್ಲಿ ಮೆಸ್ಸಿ ಜೊತೆಗೆ ಅವರ ಮಿಯಾಮಿ ತಂಡದ ಸಹ ಆಟಗಾರರಾದ ಲೂಯಿಸ್ ಸುಯೆರೆಜ್ ಮತ್ತು ರೋಡ್ರಿಗೋ ಡಿ ಪಾಲ್ ಸಹ ಇದ್ದರು. ಜನಪದ ಸಂಗೀತದೊಂದಿಗೆ ಎಲ್ಲರಿಗೂ ಭರ್ಜರಿ ಸ್ವಾಗತ ಕೋರಲಾಯಿತು.

ಇಡೀ ವಂತಾರವನ್ನು ಮೆಸ್ಸಿ ಸುತ್ತಾಡಿದರು. ಇಲ್ಲಿನ ಗ್ರೀನ್ ಎನರ್ಜಿ ಸಮುಚ್ಚಯಕ್ಕೆ ಕೂಡ ಭೇಟಿ ನೀಡಿದ ಅವರು, ವಿಶ್ವದ ಅತಿದೊಡ್ಡ ಸಂಸ್ಕರಣಾ ಘಟಕವನ್ನು ವೀಕ್ಷಿಸಿದರು.

ಭಾರತದಲ್ಲಿ ವನ್ಯಪ್ರಾಣಿಗಳ ಬಗೆಗಿನ ಕಾಳಜಿ ಹಾಗೂ ಸಂರಕ್ಷಣೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರುವ ಬದ್ಧತೆ ಕುರಿತು ಮೆಸ್ಸಿ ಮೆಚ್ಚುಗೆಯ ಮಾತುಗಳನ್ನಾಡಿದರು. ಇದೇ ಸಂದರ್ಭದಲ್ಲಿ ಅನಂತ್-ರಾಧಿಕಾ ದಂಪತಿ ವಂತಾರದಲ್ಲಿನ ಸಿಂಹದ ಮರಿಯೊಂದಕ್ಕೆ ‘ಲಯೋನೆಲ್’ ಎಂದು ನಾಮಕರಣ ಮಾಡಿದರು.

ಇಡೀ ಪ್ರವಾಸದಲ್ಲಿ ಆನೆ ಕಾಳಜಿ ಕೇಂದ್ರದಲ್ಲಿ ಮೆಸ್ಸಿ ಅವರು ಮಾಣಿಕ್ ಲಾಲ್ ಎಂಬ ಆನೆ ಮರಿ ಹಾಗೂ ಅದರ ತಾಯಿ ಪ್ರತಿಮಾ ಜೊತೆಗೆ ಖುಷಿಯಿಂದ ಸಮಯ ಕಳೆದರು. ಮೆಸ್ಸಿ ವಂತಾರಕ್ಕೆ ಭೇಟಿ ನೀಡಿದ್ದಕ್ಕಾಗಿ ಅನಂತ್ ಅಂಬಾನಿ ಧನ್ಯವಾದ ಹೇಳಿದರು. ಇದಕ್ಕೆ ವಂತಾರ ಮಾಡುತ್ತಿರುವುದು ನಿಜವಾಗಿಯೂ ಸುಂದರವಾದದ್ದು. ಆ ಪ್ರಾಣಿಗಳಿಗಾಗಿ ಮಾಡುತ್ತಿರುವ ಕೆಲಸ, ಅವುಗಳು ಪಡೆದುಕೊಳ್ಳುವ ಕಾಳಜಿ, ಅವುಗಳ ಸಂರಕ್ಷಣೆ ಮತ್ತು ಅವುಗಳನ್ನು ನೋಡಿಕೊಳ್ಳುವುದು ಎಲ್ಲವೂ ಚಂದ. ನಿಜಕ್ಕೂ ಮೆಚ್ಚುಗೆ ಪಡೆಯುವಂಥದ್ದು. ನಾವು ಇಲ್ಲಿ ಅದ್ಭುತ ಕ್ಷಣಗಳನ್ನು ಕಳೆದೆವು. ಈ ಅನುಭವ ನಮ್ಮ ಜೊತೆ ಸದಾ ಉಳಿಯುತ್ತದೆ. ಈ ಅರ್ಥಪೂರ್ಣ ಕಾರ್ಯಕ್ಕೆ ಸ್ಫೂರ್ತಿ ನೀಡುವುದಕ್ಕೆ, ಬೆಂಬಲಿಸುವ ಸಲುವಾಗಿ ಖಂಡಿತವಾಗಿಯೂ ಇಲ್ಲಿಗೆ ಮತ್ತೆ ಬರುತ್ತೇನೆ ಎಂದು ಹೇಳಿದರು.

ಈ ಭೇಟಿಯ ಕೊನೆಯಲ್ಲಿ ನಾರಿಯಲ್ ಉತ್ಸರ್ಗ್ ಹಾಗೂ ಮಟ್ಕಾ ಫೋಡ್ ಎಂಬ ಸಾಂಪ್ರದಾಯಿಕ ಆಚರಣೆಯಲ್ಲಿ ಮೆಸ್ಸಿ ಭಾಗಿಯಾದರು.