ಗ್ರಾಮೀಣ ಭಾರತದ ಆರ್ಥಿಕ ಅಭಿವೃದ್ಧಿಗೆ ಪ್ರತೀ ಗ್ರಾಮದಲ್ಲಿ ಒಂದು ಶಾಲೆ, ಒಂದು ಗ್ರಾಮ ಪಂಚಾಯತಿ, ಒಂದು ಸಹಕಾರ ಸಂಘ ಅತ್ಯಗತ್ಯ ಎನ್ನುವುದು ನೆಹರೂ ಅವರ ದೃಷ್ಟಿಯಾಗಿತ್ತು. ಇವರ ಈ ದೂರದೃಷ್ಟಿಯ ಕಾರಣಕ್ಕೆ ದೇಶದಲ್ಲಿ ಸಹಕಾರ ಚಳವಳಿ ಗಟ್ಟಿಯಾಯಿತು  ಎಂದು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಹೇಳಿದರು.
ಆವರು ಚಾಮರಾಜನಗರದಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ  ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನೆಹರೂ ಅವರ ಈ ದೂರದೃಷ್ಟಿ ಕಾರಣಕ್ಕೆ ಅವರ ಜನ್ಮ ದಿನದಂದೇ ಪ್ರತೀ ವರ್ಷ ಸಹಕಾರ ಸಪ್ತಾಹ ಉದ್ಘಾಟನೆಯಾಗುತ್ತದೆ. ಇಂದು ರಾಜ್ಯದಲ್ಲಿ ಕೃಷಿ, ಹೈನುಗಾರಿಕೆ, ಕೈಗಾರಿಕೆ, ಬ್ಯಾಂಕಿಂಗ್ ಸೇರಿ ಹಲವಾರು ಕ್ಷೇತ್ರಗಳಲ್ಲಿ ಸಹಕಾರಿ ಚಳವಳಿ, ಸಹಕಾರಿ ಸಂಘಗಳು ಬೆಳೆಯುತ್ತಲೇ ಇವೆ. ಇದು ಆರೋಗ್ಯಕಾರಿ ಬೆಳವಣಿಗೆ.
ನಾನು ಪಶು ಸಂಗೋಪನಾ ಸಚಿವನಾಗಿದ್ದಾಗ ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ವಾಯತ್ತತೆ ಮತ್ತು ಸ್ವಾವಲಂಬನೆಗೆ ಪೂರ್ಣ ಸಹಕಾರ ನೀಡಿದ್ದೆ. ಈಗ ಒಂದು ದಿನಕ್ಕೆ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ನಾನು ಹಾಲು ಉತ್ಪಾದಕರ ಅನುಕೂಲಕ್ಕಾಗಿ ಲೀಟರ್ ಗೆ 5ರೂ ನಂತೆ ಒಂದು ದಿನಕ್ಕೆ 5 ಕೋಟಿ ರೂಪಾಯಿ ಸಹಾಯ ಧನವನ್ನು ರೈತರಿಗೆ ನಮ್ಮ ಸರ್ಕಾರದಿಂದ ನೀಡಲಾಗುತ್ತಿದೆ. ನಾವು ಎರಡು ಬಾರಿ ಹಾಲಿನ ದರವನ್ನು ಹೆಚ್ಚಿಸಿದರೂ ಆ ಹೆಚ್ಚುವರಿ ಹಣ ಹಾಲು ಉತ್ಪಾದಕರಿಗೇ ಹೋಗಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಸಂಸದರಾದ ಸುನೀಲ್ ಬೋಸ್, ಶಾಸಕರಾದ ಕೆ.ಎನ್.ರಾಜಣ್ಣ, ಪುಟ್ಟರಂಗ ಶೆಟ್ಟಿ, ಜಿ.ಟಿ.ದೇವೇಗೌಡರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಸಹಕಾರಿ ರಂಗದ ಧುರೀಣರು ಉಪಸ್ಥಿತರಿದ್ದರು.