ಬ್ಯಾಂಕಾಕ್: ಥೈಲ್ಯಾಂಡ್ (Thailand) ರಾಜಧಾನಿ ಬ್ಯಾಂಕಾಕ್‌ನ (Bangkok) ಫುಡ್ ಮಾರ್ಕೆಟ್‌ನಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.

ಬ್ಯಾಂಕಾಕ್‌ನ ಪ್ರಸಿದ್ಧ ಆರ್ ತೋರ್ ಕೋರ್ (Or To Ko market) ಫುಡ್ ಮಾರ್ಕೆಟ್‌ನಲ್ಲಿ ವ್ಯಕ್ತಿಯೊಬ್ಬ 5 ಜನರ ಮೇಲೆ ಬಂದೂಕಿನಿಂದ ಗುಂಡು ಹಾರಿಸಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಇದನ್ನೂ ಓದಿ : ಪಚ್ಚಿನಡ್ಕ : ಆಟಿದ ಕೂಟ

ಆರ್ ತೋರ್ ಕೋರ್ ಮಾರ್ಕೆಟ್‌ನ ನಾಲ್ವರು ಭದ್ರತಾ ಸಿಬ್ಬಂದಿಯನ್ನು ಹಾಗೂ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಇಬ್ಬರು ಮಾರಾಟಗಾರರು ಗಾಯಗೊಂಡಿದ್ದಾರೆ.

ಬಂದೂಕುಧಾರಿಗೂ ಮಾರ್ಕೆಟ್‌ನಲ್ಲಿದ್ದ ಭದ್ರತಾ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಗುಂಡಿನ ದಾಳಿಯ ನಿಖರ ಕಾರಣವನ್ನು ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇತ್ತೀಚೆಗೆ ಥೈಲ್ಯಾಂಡ್‌ನಲ್ಲಿ ಈ ರೀತಿಯ ಗುಂಡಿನ ದಾಳಿಗಳು ಸಾಮಾನ್ಯವಾಗಿವೆ. 2020ರಲ್ಲಿ ಕಿರಿಯ ಸೇನಾಧಿಕಾರಿ ಗುಂಡಿನ ದಾಳಿ ನಡೆಸಿ, 29 ಜನರ ಸಾವಿಗೆ ಕಾರಣನಾಗಿದ್ದ. ಈ ಘಟನೆಯಲ್ಲಿ 58 ಜನ ಗಾಯಗೊಂಡಿದ್ದರು.