ಶಿಕ್ಷಣವು ನಾಳಿನ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ. ಸಂವೇದನೆ ಮತ್ತು ಆತ್ಮವಿಶ್ವಾಸ ಶಿಕ್ಷಣದ ಜೀವಾಳ. ಇವರಡನ್ನೂ ಈ ಶಾಲೆಯಲ್ಲಿ ಕಂಡಿದ್ದೇನೆ ಎಂದು ಪಶುವೈದ್ಯರು ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೃಷ್ಣ ಭಟ್‌ಕೊಂಕೋಡಿ ಹೇಳಿದರು.
ಅವರು ಡಿ.19ರಂದು ಕಲ್ಲಡ್ಕ ಶ್ರೀರಾಮ ಹಿ. ಪ್ರಾ. ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆದ ವಿವಿಧ ಕ್ಷೇತ್ರದಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗಾಗಿ ನಡೆದ ಅಭಿನಂಧನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾಗಿ ರಾಷ್ಟ್ರ ಮಟ್ಟದಲ್ಲಿಯೂ ಸಾಧನೆ ಮಾಡಿರುವುದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸಾಧಕನಾಗುವವನು ಭೋಗದ ಕಡೆಗೆ ಗಮನ ಕೊಡದೆ ಗುರಿಯತ್ತ ಗಮನ ಹರಿಸಿ, ಎಷ್ಟೇ ಕಷ್ಟ ದುಃಖಗಳ ಮಧ್ಯೆಯು ಸಾಧಿಸುವ ಛಲವನ್ನು ಬಿಡದೆ ಮುನ್ನುಗ್ಗಿ. ಇದೇ ರೀತಿಯ ಇನ್ನೂ ಹೆಚ್ಚಿನ ಸಾಧನೆಗಳು ಮಾಡಿ ವಿದ್ಯಾಸಂಸ್ಥೆಗೆ, ಗುರುಹಿರಿಯರಿಗೆ, ಪೋಷಕರಿಗೂ ಕೀರ್ತಿತರುವಂತವರಾಗಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ 2023-24ರ ಶೈಕ್ಷಣಿಕ ವರ್ಷದಲ್ಲಿ ಕ್ರೀಡೆ, ಗಣಿತ, ವಿಜ್ಞಾನ ಹಾಗೂ ಕಲಾ ಕ್ಷೇತ್ರದಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತೃ ಸ್ವರೂಪಿಣಿ ಡಾ| ಕಮಲಾ ಪ್ರಭಾಕರ್ ಭಟ್, ಆಡಳಿತ ಮಂಡಳಿ ಸದಸ್ಯರಾದ ಮಲ್ಲಿಕಾ ಶೆಟ್ಟಿ, ಸುಧಾ ಕಶೆಕೋಡಿ, ಲಕ್ಷ್ಮೀ ರಘುರಾಜ್ ಆರತಿಬೆಳಗಿ, ಅಕ್ಷತೆ ಹಾಕಿ, ಸಿಹಿ ನೀಡಿ ಆರ್ಶೀವದಿಸಿದರು.


ಇದೇ ವೇಳೆ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಾಗಿ ಶಾಲೆಯ ಕೀರ್ತಿಗೆ ಕಾರಣರಾದ ಕ್ರೀಡಾಪಟುಗಳಿಗೆ ತರಬೇತು ನೀಡಿದ ಶೋನಿತ್‌ರಾಜ್‌ ಅವರನ್ನು ಸಮ್ಮಾನಿಸಲಾಯಿತು. ಬಳಿಕ ಎಲ್ಲಾ ಸಾಧಕರಿಗೂ ಪ್ರಶಸ್ತಿ – ಪುರಸ್ಕಾರ ನೀಡಿ ಗೌರವಿಸಲಾಯಿತು.ಅಧ್ಯಾಪಕ ಬಾಲಕೃಷ್ಣ ಬಹುಮಾನ ಪಟ್ಟಿ ವಾಚಿಸಿದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ್ ಭಟ್‌ ಕಲ್ಲಡ್ಕ, ಕೋಶಾಧಿಕಾರಿ ಅಚ್ಯುತ್ ನಾಯಕ್, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಸಮಿತಿಯ ಸದಸ್ಯ ಕೆದಿಲ ಸುಬ್ರಹ್ಮಣ್ಯ ಭಟ್, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್‌ಎನ್., ಮುಖ್ಯ ಶಿಕ್ಷಕ ವಿರಾಜ್‌ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 9ನೇ ತರಗತಿಯ ಧಾತ್ರಿ ಪ್ರೇರಣಾ ಹಾಡಿದರು. ತಬಲದಲ್ಲಿ 5ನೇ ತರಗತಿಯ ಅಪ್ರಮೇಯ ಸಹಕರಿಸಿದನು. ಸುಶ್ಮಿತ ಭಟ್ ಸ್ವಾಗತಿಸಿ, ಆದಿತ್ಯ ವಂದಿಸಿದರು. ವಿದ್ಯಾರ್ಥಿಗಳಾದ ವೈಷ್ಣವಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು.