ಮಂಗಳೂರು: ಸೇವಾ ಮನೋಭಾವನೆ ಹೊಂದಿರುವ ವಾಮಂಜೂರು ರಿಕ್ಷಾ ಚಾಲಕರ ಸಂಘ ಇತರರಿಗೆ ಮಾದರಿ ಮತ್ತು ಪ್ರೇರಕವಾಗಿದೆ. ಈ ಸಂಘವು ಸ್ಥಳೀಯವಾಗಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಸಂಘದ ಮುಂದಿನ ಯೋಜನೆಗಳಿಗೂ ಸಹಕರಿಸುವೆ ಎಂದು ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಹೇಳಿದರು.
ಅವರು 27 ರಂದು ಮಂಗಳೂರಿನ ರೋಟರಿ ಕ್ಲಬ್ ನ ಅನುದಾನದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ವಾಮಂಜೂರು ಜಂಕ್ಷನ್‌ನಲ್ಲಿರುವ ನೇತಾಜಿ ಆಟೋ ಚಾಲಕರ ಸಂಘ(ರಿ)ದ ಆಶ್ರಯದಲ್ಲಿ `ಶುದ್ಧ ನೀರಿನ ಘಟಕ’ವನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ರೋಟರಿ ಕ್ಲಬ್‌ನ ಜಿಲ್ಲಾ ಗವರ್ನರ್ ಎಚ್. ಆರ್. ಕೇಶವ್ ಮಾತನಾಡಿ, ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದ ಸೇವೆ ಇದಾಗಿದೆ. ಇದು ಮಾನವೀಯತೆ ಮೆರೆಯುವ ಸೇವೆ. ಪ್ರೇಕ್ಷಣೀಯ ಸ್ಥಳವಾದ ಪಿಲಿಕುಳಕ್ಕೆ ಬರುವ ಪ್ರವಾಸಿಗರು ಹಾಗೂ ಸಾರ್ವಜನಿಕರಿಂದ ಈ ಘಟಕ ಸದುಪಯೋಗವಾಗಲಿ ಎಂದು ಹಾರೈಸಿದರು.
ನೇತಾಜಿ ಆಟೋ ಚಾಲಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಕೆತ್ತಿಕಲ್ ಮಾತನಾಡಿ, ಎಲ್ಲರ ಸಹಕಾರದಿಂದ ನಮ್ಮ ಕೆಲಸಕ್ಕೆ ಬಲ ಬಂದಿದೆ. ಸಾರ್ವಜನಿಕರಿಗೆ ಒದಗಿಸಲಾದ ನೀರಿನ ಘಟಕದ ಶುಚಿತ್ವ ಕಾಪಾಡುವಲ್ಲಿ ಸಾರ್ವಜನಿಕರ ಪಾತ್ರವೂ ಇದೆ. ಸಂಘ ಈಗಾಗಲೇ ಕಾರ್ಯಗತಗೊಳಿಸಿದ (ಸಾರ್ವಜನಿಕ ಶೌಚಾಲಯ, ಆರೋಗ್ಯ ತಪಾಸಣೆ, ನೀರಿನ ಘಟಕ) ಪ್ರತಿಯೊಂದು ಸೇವೆಗೂ ಸಮಾಜದಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಮುಂದೆಯೂ ಕೈಗೆತ್ತಿಕೊಳ್ಳುವ ಸೇವಾ ಕಾರ್ಯಗಳಿಗೆ ಸಂಘವು ದಾನಿಗಳ ಸಹಕಾರ ಬಯಸುತ್ತದೆ ಎಂದರು.
ಮಂಗಳೂರು ದಕ್ಷಿಣ ರೋಟರಿ ಕ್ಲಬ್ ಅಧ್ಯಕ್ಷ ಹರ್ಷಕರ್, ವಲಯ 3ರ ಸಹಾಯಕ ಗವರ್ನರ್ ಪಿ. ಡಿ. ಶೆಟ್ಟಿ ಅವರು ವಾಮಂಜೂರು ರಿಕ್ಷಾ ಚಾಲಕರು ಜಾತ್ಯತೀತ ನೆಲೆಯಲ್ಲಿ ಕೈಗೊಂಡ ಈ ಕಾರ್ಯವನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ, ರೊಟೇರಿಯನ್ ಅಂಕಿತ್ ಕರ್ಕೇರ, ಸತೀಶ್ ಬೋಳಾರ, ಮಾಜಿ ಕಾರ್ಪೊರೇಟರ್ ಜಯಪ್ರಕಾಶ್(ಜೆ.ಪಿ), ಸಂಘದ ಮಾಜಿ ಅಧ್ಯಕ್ಷ ಮೋಹನದಾಸ್ ನಾಯಕ್, ಮೋಹನದಾಸ್ ಶೆಟ್ಟಿ ವಾಮಂಜೂರು, ರಘು ಸಾಲ್ಯಾನ್, ದಿನೇಶ್ ಜೆ. ಕರ್ಕೇರ, ಉಮೇಶ್ ಕೋಟ್ಯಾನ್, ರಿತೇಶ್ ಶೆಟ್ಟಿ, ಸೂರ್ಯಕಾಂತ್ ನಾಯಕ್, ನಿತೀನ್ ಅತ್ತಾವರ, ಹರೀಶ್ ಅಡ್ಯಾರ್, ರಾಜಕುಮಾರ್ ಶೆಟ್ಟಿ, ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಹಿತೈಷಿಗಳು ಉಪಸ್ಥಿತರಿದ್ದರು.
ರಿಕ್ಷಾ ಚಾಲಕ ಪುರುಷೋತ್ತಮ ಅಂಚನ್ ಸ್ವಾಗತಿಸಿ, ವಂದಿಸಿದರು. ರಿಕ್ಷಾ ಚಾಲಕ ರಮೇಶ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.